ಕೇರಳ ರಾಜ್ಯಪಾಲ ಸಂಘಪರಿವಾರದ ಪ್ರತಿನಿಧಿ ; ಪಿಣರಾಯಿ ವಾಗ್ದಾಳಿ
ಪಿಣರಾಯಿ ವಿಜಯನ್ | Photo: PTI
ತಿರುವನಂತಪುರ: ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ವಿರುದ್ಧ ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದು, ಅವರೊಬ್ಬ ಸಂಘಪರಿವಾರದ ಪ್ರತಿನಿಧಿಯೆಂದು ಟೀಕಿಸಿದ್ದಾರೆ.
ಕೇರಳ ವಿಶ್ವವಿದ್ಯಾನಿಲದ ಸೆನೆಟಿಗೆ ನಾಮನಿರ್ದೇಶನ ಮಾಡಲು ತಾನು ಆಯ್ಕೆ ಮಾಡಿದ ಹೆಸರುಗಳನ್ನು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ತಿರಸ್ಕರಿಸಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಪಿಣರಾಯಿ ಅವರು ಈ ವಾಗ್ದಾಳಿ ನಡೆಸಿದ್ದಾರೆ.
‘‘ರಾಜ್ಯಪಾಲ ಖಾನ್ಅವರು ಕೇಂದ್ರ ಸರಕಾರಕ್ಕೆ ಏನೂ ಬೇಕಾದರೂ ಮಾಡಲು ತಯಾರಿದ್ದಾರೆ. ಅವರೊಬ್ಬ ಸಂಘಪರಿವಾರದ ಪ್ರತಿನಿಧಿ’’ ಎಂದು ವಿಜಯನ್ ಟೀಕಿಸಿದರು.
ತ್ರಿಶೂರಿನಲ್ಲಿ ‘ನವಕೇರಳ ಸದಸ್’ ಸಮಾವೇಶದಲ್ಲಿ ಮಾತನಾಡಿದ ಅವರು, ‘‘ಸಂಘಪರಿವಾರದ ಪ್ರತಿನಿಧಿಯೊಬ್ಬರು ಇಲ್ಲಿದ್ದಾರೆ. ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಕೇಂದ್ರ ಸರಕಾರಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಥವಿರುವಂತಹ ವ್ಯಕ್ತಿಯಾಗಿದ್ದಾರೆ ’’ಎಂದರು.
ಸೆನೆಟಿಗೆ ನಾಮನಿರ್ದೇಶನಗೊಳಿಸಲು ಕೇರಳ ವಿವಿ ಶಿಫಾರಸು ಮಾಡಿದವರ ಹೆಸರುಗಳನ್ನು ರಾಜ್ಯಪಾಲರು ತಿರಸ್ಕರಿಸಿರುವುದು, ಅವರು ಬಲಪಂಥೀಯ ನಿಲುವಿನಿಂದ ಪ್ರಭಾವಿತರಾಗಿದ್ದಾರೆಂಬುದಕ್ಕೆ ಸಾಕ್ಷಿ ಎಂದು ವಿಜಯನ್ ಟೀಕಿಸಿದ್ದಾರೆ.
ಸೆನೆಟಿಗೆ ನಾಮನಿರ್ದೇಶನಗೊಂಡವರ ಅರ್ಹತೆಗಳನ್ನು ಪರಿಗಣಿಸದೆಯೇ ರಾಜ್ಯಪಾಲರು ಹೇಗೆ ಆಯ್ಕೆ ಮಾಡಿದರೆಂದು ವಿಜಯನ್ ಪ್ರಶ್ನಿಸಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ನೇಮಕಾತಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಪಾಲರು ಹಾಗೂ ಕೇರಳ ಸರಕಾರದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಮುಖ್ಯಮಂತ್ರಿಯವರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ರಾಜ್ಯಪಾಲರು ಸೆನೆಟಿಗೆ ಆಯ್ಕೆ ಮಾಡಿದ ಬಹುತೇಕ ನಾಮನಿರ್ದೇಶಿತರು ಬಲಪಂಥೀಯ ಹಿನ್ನೆಲೆಯುಳ್ಳವರಾಗಿದ್ದಾರೆ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆಯೆಂದು ಆರೋಪಿಸಿ ಸಿಪಿಎಂನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ತ್ರಿಶೂರಿನಲ್ಲಿ ಪಾದಯಾತ್ರೆ ನಡೆಸಿತು.