ಮ್ಯಾನ್ಮಾರ್-ಥಾಯ್ಲೆಂಡ್ ಗಡಿಬಳಿಯಿದ್ದ ಸೈಬರ್ ಅಪರಾಧ ಕೇಂದ್ರಗಳಿಂದ 549 ಭಾರತೀಯರ ರಕ್ಷಣೆ

Credit: X/@MEAIndia
ಹೊಸದಿಲ್ಲಿ: ಮ್ಯಾನ್ಮಾರ್-ಥಾಯ್ಲೆಂಡ್ ಗಡಿಗುಂಟ ಇದ್ದ ಸೈಬರ್ ಅಪರಾಧ ಕೇಂದ್ರಗಳಿಂದ 549 ಭಾರತೀಯರನ್ನು ರಕ್ಷಿಸಲಾಗಿದ್ದು, ಅವರನ್ನು ಎರಡು ಸೇನಾ ವಿಮಾನಗಳಲ್ಲಿ ಭಾರತಕ್ಕೆ ಮರಳಿ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈ ಭಾರತೀಯರು ನಕಲಿ ಉದ್ಯೋಗ ಆಮಿಷದ ಸಂತ್ರಸ್ತರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಮಂಗಳವಾರದಂದು 266 ಭಾರತೀಯರನ್ನು ಸುರಕ್ಷಿತವಾಗಿ ವಾಪಸು ಕರೆ ತರಲು ಸರಕಾರ ಭಾರತೀಯ ವಾಯು ಪಡೆ ವಿಮಾನದ ವ್ಯವಸ್ಥೆ ಮಾಡಿತ್ತು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಕೂಡಾ ಇದೇ ರೀತಿಯಲ್ಲಿ 266 ಭಾರತೀಯರನ್ನು ವಾಪಸು ಕರೆ ತರಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬಹುತೇಕ ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶದ ಭಾರತೀಯ ಪ್ರಜೆಗಳಿಗೆ ಥಾಯ್ಲೆಂಡ್ ಅಥವಾ ಮ್ಯಾನ್ಮಾರ್ ನಲ್ಲಿ ಉದ್ಯೋಗ ಒದಗಿಸುವ ಆಮಿಷ ಒಡ್ಡಲಾಗಿತ್ತು. ನಂತರ, ಅವರನ್ನು ಮ್ಯಾನ್ಮಾರ್ ನಲ್ಲಿರುವ ಮೈಯಾವಡ್ಡಿ ಪ್ರಾಂತ್ಯದಲ್ಲಿನ ಸೈಬರ್ ಅಪರಾಧ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು ಎಂದು ಅವರು ಹೇಳಿದ್ದಾರೆ.
ಭಾರತೀಯರ ಬಿಡುಗಡೆ ಹಾಗೂ ವಾಪಸಾತಿಗಾಗಿ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಆ ಎರಡು ದೇಶಗಳ ಸರಕಾರಗಳೊಂದಿಗೆ ನಿಕಟವಾಗಿ ವ್ಯವಹರಿಸಿದ್ದವು ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ನಕಲಿ ಉದ್ಯೋಗದ ಆಮಿಷಕ್ಕೊಳಗಾಗಿ ಮ್ಯಾನ್ಮಾರ್ ಸೇರಿದಂತೆ ಹಲವು ಈಶಾನ್ಯ ಏಶ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಬಿಡುಗಡೆಗೊಳಿಸಲು ಸರಕಾರ ಸುಸ್ಥಿರ ಪ್ರಯತ್ನವನ್ನು ನಡೆಸುತ್ತಿದೆ ಎಂದು ಸೋಮವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿತ್ತು.