ಪಾರದರ್ಶಕ ಕ್ಷೇತ್ರ ಮರುವಿಂಗಡಣೆಗೆ ಒತ್ತಾಯಿಸಿ ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ | PTI
ಹೈದರಾಬಾದ್: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ ಜನಸಂಖ್ಯೆಯು ಏಕೈಕ ಮಾನದಂಡವಾಗಬಾರದು ಎಂದು ಹೇಳುವ ನಿರ್ಣಯವೊಂದನ್ನು ತೆಲಂಗಾಣ ವಿಧಾನಸಭೆ ಗುರುವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪ್ರಸ್ತಾಪಿತ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆಯ ಆಧಾರದಲ್ಲಿ ಮಾಡಿದರೆ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವು 24 ಶೇಕಡದಿಂದ 19 ಶೇಕಡಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಹೇಳಿದರು.
‘‘ದಕ್ಷಿಣದ ರಾಜ್ಯಗಳು ಕುಟುಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದವು. ಈಗ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆಯ ಆಧಾರದಲ್ಲಿ ಮಾಡುವುದಾದರೆ, ಕುಟುಂಬ ಯೋಜನೆಯನ್ನು ಪ್ರಾಮಾಣಿಕತೆಯಿಂದ ಜಾರಿಗೊಳಿಸಿರುವ ತಪ್ಪಿಗಾಗಿ ಈ ರಾಜ್ಯಗಳು ಶಿಕ್ಷೆ ಅನುಭವಿಸಲಿವೆ’’ ಎಂದು ಅವರು ಅಭಿಪ್ರಾಯಪಟ್ಟರು.
ಕ್ಷೇತ್ರ ಪುನರ್ವಿಂಗಡಣೆ ಮಾಡುವಾಗ ಸಂಬಂಧಪಟ್ಟವರೊಂದಿಗೆ ಪಾರದರ್ಶಕ ಸಮಾಲೋಚನೆಗಳನ್ನು ಮಾಡಬೇಕು ಎಂಬುದಾಗಿ ನಿರ್ಣಯವು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
‘‘ಕೇಂದ್ರ ಸರಕಾರದ ಒತ್ತಡಕ್ಕೆ ಒಳಗಾಗಿ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದವು. ಇದರ ಪರಿಣಾಮವಾಗಿ ಆ ರಾಜ್ಯಗಳ ಜನಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ, ಈಗ ಅದಕ್ಕಾಗಿ ಅವುಗಳನ್ನು ಶಿಕ್ಷಿಸುವುದು ಬೇಡ’’ ಎಂಬುದಾಗಿ ನಿರ್ಣಯವು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
‘‘ಹಾಗಾಗಿ, ಕ್ಷೇತ್ರ ಮರುವಿಂಗಡಣೆ ಕೈಗೆತ್ತಿಕೊಳ್ಳುವಾಗ ಜನಸಂಖ್ಯೆಯು ಏಕೈಕ ಮಾನದಂಡವಾಗಬಾರದು’’ ಎಂದು ನಿರ್ಣಯ ಹೇಳಿದೆ.
ಎ.ಪಿ. ರೀಆರ್ಗನೈಸೇಶನ್ ಕಾಯ್ದೆ, 2014ಕ್ಕೆ ಅನುಗುಣವಾಗಿ ತೆಲಂಗಾಣ ರಾಜ್ಯ ವಿಧಾನಸಭೆಯ ಸ್ಥಾನಗಳನ್ನು ತಕ್ಷಣದಿಂದ 119ರಿಂದ 153ಕ್ಕೆ ಹೆಚ್ಚಿಸುವಂತೆಯೂ ನಿರ್ಣಯವು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.







