ಮಾತುಕತೆ ಮೂಲಕ ಸಂಘರ್ಷ ಬಗೆಹರಿಸಿ: ಮೆಹಬೂಬಾ ಮುಫ್ತಿ

ಮೆಹಬೂಬಾ ಮುಫ್ತಿ | PC : PTI
ಶ್ರೀನಗರ: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಅಲ್ಲದೆ, ಸಂಯಮ ಕಾಪಾಡುವಂತೆ ಅವರು ಉಭಯ ದೇಶಗಳನ್ನು ವಿನಂತಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಶಸಸ್ತ್ರ ಸಂಘರ್ಷ, ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ನಡುವೆ ಮುಫ್ತಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ತನ್ನ ‘ಎಕ್ಸ್’ನ ಖಾತೆಯಲ್ಲಿ ಮೆಹಬೂಬಾ ಮುಫ್ತಿ, ಎಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಾಂಧವ್ಯವನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿದೆ ಎಂದಿದ್ದಾರೆ.
ಉಭಯ ದೇಶಗಳ ನಡುವಿನ ಸಂಘರ್ಷ ಮಹಿಳೆ ಹಾಗೂ ಮಕ್ಕಳು ಸೇರಿದಂತೆ ಅಮಾಯಕರ ಜೀವವನ್ನು ಬಲಿ ಪಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಎರಡೂ ಕಡೆಗಳಲ್ಲಿ ಮತ್ತಷ್ಟು ಸಾವು ನೋವುಗಳಾಗಲಿವೆ ಎಂದು ಅವರು ಹೇಳಿದ್ದಾರೆ.
ಪ್ರಾಮಾಣಿಕ ಹಾಗೂ ಸುಸ್ಥಿರ ಪ್ರಯತ್ನಗಳ ಮೂಲಕ ಮಾತ್ರ ನಾವು ಉದ್ವಿಗ್ನತೆಯನ್ನು ಕಡಿಮೆ ಮಾಡಬಹುದು ಹಾಗೂ ಶಾಂತಿಯನ್ನು ಮರು ಸ್ಥಾಪಿಸಲು ಕಠಿಣ ಪರಿಶ್ರಮವನ್ನು ಆರಂಭಿಸಬಹುದು ಎಂದು ಅವರು ತಿಳಿಸಿದ್ದಾರೆ.





