ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ; ಪೊಲೀಸ್ ಕಮಾಂಡೊಗಳ ಮೇಲೆ ಗುಂಡಿನ ದಾಳಿ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಮಣಿಪುರದಲ್ಲಿ ಶನಿವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೊರೆಹಾ ಪಟ್ಟಣದಲ್ಲಿ ಅಪರಿಚಿತ ಬಂದೂಕುಧಾರಿಗಳು ಪೊಲೀಸ್ ಕಮಾಂಡೊಗಳ ಮೇಲೆ ಗುಂಡುಹಾರಿಸಿ ಪರಾರಿಯಾಗಿದ್ದಾರೆ.
ಪೊಲೀಸ್ ಕಮಾಂಡೊಗಳನ್ನು ಕೊಂಡೊಯ್ಯುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
“ಗುಂಡುಹಾರಾಟದಿಂದಾಗಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂಫಾಲ್-ಮೊರೆಹ್ ರಸ್ತೆಯಲ್ಲಿ ವಾಹನಗಳು ಹಾದುಹೋಗುತ್ತಿದ್ದಾಗ ಅವುಗಳ ಮೇಲೆ ದಾಳಿ ನಡೆದಿದೆ’’ ಎಂದು ಮಣಿಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳು ಪೊಲೀಸ್ ಗೆ 5 ಅಸ್ಸಾಂ ರೈಫಲ್ಸ್ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.
ದಾಳಿಯ ಆನಂತರ ನ್ಯೂ ಮೊರೆಹಾ ಹಾಗೂ ಎಂ.ಚಾನಾವು ಗ್ರಾಮದ ಬಳಿ ಬಂದೂಕುಧಾರಿಗಳು ಮನಬಂದಂತೆ ಗುಂಡುಹಾರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಗ್ರಾಮ ಸ್ವಯಂಸೇವಕನ ಹತ್ಯೆ:
ಈ ಮಧ್ಯೆ ಶನಿವಾರ ನಸುಕಿನಲ್ಲಿ ಮೈತೈ ಗ್ರಾಮ ಸ್ವಯಂಸೇವಕನೊಬ್ಬನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಮೈತೈ ಪ್ರಾಬಲ್ಯದ ಇಂಫಾಲ ಪಶ್ಚಿಮ ಹಾಗೂ ಕುಕಿ ಬಾಹುಳ್ಯದ ಕಾಂಗ್ಪೊಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಬೆಟ್ಚತಪ್ಪಲು ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ.
ಅಪರಿಚಿತರ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ೨೭ ವರ್ಷದ ಜೇಮ್ಸ್ ನಿಂಗೊಬಾಮ್ ರನ್ನು ಇಂಫಾಲದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಕೊನೆಯುಸಿರೆಳೆದರೆಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯು ಮಾಜಿ ಪತ್ರಕರ್ತನಾಗಿದ್ದು, ಅವರು ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.