ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಇಡೀ ರಾಜ್ಯವನ್ನು ‘ಪ್ರಕ್ಷುಬ್ದ ಪ್ರದೇಶ’ವೆಂದು ಘೋಷಿಸಿದ ಸರಕಾರ

PHOTO: PTI
ಇಂಫಾಲ: ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳು ಹತ್ಯೆಯಾದ ಭಾವಚಿತ್ರ ವೈರಲ್ ಆದ ಬಳಿಕ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಮಣಿಪುರ ರಾಜ್ಯ ಸರಕಾರ ಬುಧವಾರ ಇಡೀ ರಾಜ್ಯವನ್ನು ‘ಪ್ರಕ್ಷುಬ್ದ ಪ್ರದೇಶ’ ಎಂದು ಘೋಷಿಸಿದೆ. ನಿರ್ದಿಷ್ಟ 19 ಪೊಲೀಸ್ ಠಾಣೆ ಪ್ರದೇಶಗಳನ್ನು ಹೊರತುಪಡಿಸಿ ಇಡೀ ರಾಜ್ಯವನ್ನು ‘ಪ್ರಕ್ಷುಬ್ದ ಪ್ರದೇಶ’ ಎಂದು ಘೋಷಿಸಲಾಗಿದೆ ಎಂದು ರಾಜ್ಯ ಸರಕಾರದ ಅಧಿಸೂಚನೆ ತಿಳಿಸಿದೆ.
‘‘ವಿವಿಧ ಉಗ್ರ ಸಂಘಟನೆ ಹಾಗೂ ಬಂಡುಕೋರರ ಗುಂಪುಗಳ ಹಿಂಸಾತ್ಮಕ ಕೃತ್ಯಗಳನ್ನು ನಿಯಂತ್ರಿಸಲು ಮಣಿಪುರದಾದ್ಯಂತ ಆಡಳಿತಕ್ಕೆ ನೆರವು ನೀಡಲು ಶಸಸ್ತ್ರ ಪಡೆಯನ್ನು ನಿಯೋಜಿಸುವುದು ಅಗತ್ಯವಾಗಿದೆ’’ ಎಂದು ಅಧಿಸೂಚನೆ ತಿಳಿಸಿದೆ. ‘ಪ್ರಕ್ಷುಬ್ದ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶಗಳಲ್ಲಿ ರಾಜ್ಯದ ರಾಜಧಾನಿ ಇಂಫಾಲ ಹಾಗೂ ಲಾಂಫೆಲ್ ನಗರ, ಸಿಂಗ್ಜಾಮೈ, ಸೆಕ್ಮಿ, ಲಾಮ್ಸಂಗ್, ಪಾಸ್ಟೋಯಿ, ವಾಂಗೊಯಿ, ಪೋರೊಂಪಾಟ್, ಹೈಂಗಾಂಗ್, ಲಾಮ್ಲೈ, ಇರಿಲ್ಬಂಗ್, ಲೈಮಾಖೋಂಗ್, ಥೌಬಾಲ್, ಬಿಷ್ಣುಪುರ, ನಂಬೋಲ್, ಮೊಯಿರಾಂಗ್, ಕಾಕ್ಚಿಂಗ್ ಹಾಗೂ ಜಿರಿಬಮ್ ಸಹಿತ ಹಲವು ಪ್ರದೇಶಗಳು ಒಳಗೊಂಡಿವೆ.
ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿ, ರಾಜ್ಯಾಡಳಿತದ ಸಾಮರ್ಥ್ಯವನ್ನು ಗಮನದಲ್ಲಿ ಇರಿಸಿಕೊಂಡು ಪ್ರಸಕ್ತ ಪ್ರಕ್ಷುಬ್ದ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಗೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ. ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಹತ್ಯೆಯ ಫೋಟೊ ವೈರಲ್ ಆದ ಬಳಿಕ ಮಂಗಳವಾರ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆ ಸಂದರ್ಭ ಪೊಲೀಸರು ಅಶ್ರುವಾಯು ಸೆಲ್, ಲಾಠಿ ಪ್ರಹಾರ ನಡೆಸಿದ ಪರಿಣಾಮ 50ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅನಂತರ ಮಣಿಪುರ ಪ್ರಕ್ಷುಬ್ದಗೊಂಡಿದ್ದು, ಮೊಬೈಲ್ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸೇವೆಗಳನ್ನು ರದ್ದುಗೊಳಿಸಲಾಗಿದೆ.
ಇಬ್ಬರು ವಿದ್ಯಾರ್ಥಿಗಳ ಅಪಹರಣ ಹಾಗೂ ಹತ್ಯೆಯನ್ನು ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಇಂಫಾಲದಲ್ಲಿ ಎರಡನೇ ದಿನವಾದ ಬುಧವಾರ ಕೂಡ ರ್ಯಾಲಿ ನಡೆಸಿದ್ದಾರೆ.







