ವಜಾಗೊಂಡ ಸರಕಾರಿ ಉದ್ಯೋಗಿಯ ನಿವೃತ್ತಿ ಸೌಲಭ್ಯಗಳೂ ರದ್ದು: ಪಿಂಚಣಿ ನಿಯಮಗಳಿಗೆ ಬದಲಾವಣೆ ತಂದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಸಾರ್ವಜನಿಕ ಕ್ಷೇತ್ರದ ಉದ್ಯಮ (ಪಿಎಸ್ಯು)ವೊಂದರ ಉದ್ಯೋಗಿಯೊಬ್ಬರು ವಜಾಗೊಂಡರೆ ಅವರ ನಿವೃತ್ತಿ ಸೌಲಭ್ಯಗಳು ರದ್ದಾಗುತ್ತವೆ ಎಂದು ಕೇಂದ್ರ ಸರಕಾರ ಹೇಳಿದೆ.
ಆದಾಗ್ಯೂ, ಉದ್ಯೋಗಿಯೊಬ್ಬರನ್ನು ವಜಾಗೊಳಿಸಲು ತೆಗೆದುಕೊಳ್ಳುವ ನಿರ್ಧಾರವು ಸಂಬಂಧಿತ ಆಡಳಿತಾತ್ಮಕ ಸಚಿವಾಲಯದ ಪರಿಶೀಲನೆಗೆ ಒಳಪಡುತ್ತದೆ.
ಇದಕ್ಕೆ ಸಂಬಂಧಿಸಿ ಸಿಬ್ಬಂದಿ ಸಚಿವಾಲಯವು 2021ರ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳಿಗೆ ಮಹತ್ವದ ಬದಲಾವಣೆಗಳನ್ನು ತಂದಿದೆ.
ಇತ್ತೀಚೆಗೆ ಅಧಿಸೂಚನೆಗೊಂಡಿರುವ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ತಿದ್ದುಪಡಿ ನಿಯಮಗಳು, 2025ರ ಪ್ರಕಾರ, ‘‘ಸಾರ್ವಜನಿಕ ಕ್ಷೇತ್ರದ ಉದ್ಯಮವೊಂದರ ಉದ್ಯೋಗಿಯೋರ್ವ ಯಾವುದಾದರೂ ದುರ್ನಡತೆಗಾಗಿ ಸೇವೆಯಿಂದ ವಜಾಗೊಂಡರೆ, ಅವರ ನಿವೃತ್ತಿ ಸೌಲಭ್ಯಗಳೂ ರದ್ದುಗೊಳ್ಳುತ್ತವೆ’’.
ಈ ಮೊದಲಿನ ನಿಯಮಗಳ ಪ್ರಕಾರ, ಸಾರ್ವಜನಿಕ ಕ್ಷೇತ್ರದ ಉದ್ಯಮವೊಂದರ ಉದ್ಯೋಗಿಯೋರ್ವ ಸೇವೆಯಿಂದ ವಜಾಗೊಂಡರೂ ಅವರ ನಿವೃತ್ತಿ ಸೌಲಭ್ಯಗಳಿಗೆ ಯಾವುದೇ ಬಾಧಕವಿರಲಿಲ್ಲ.
ಆದರೆ, ವಜಾಗೊಂಡ ಉದ್ಯೋಗಿಯು ಮುಂದೆ ‘‘ಉತ್ತಮ ನಡತೆಯನ್ನು ಪ್ರದರ್ಶಿಸಿದರೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಮಂದುವರಿಸಬಹುದಾಗಿದೆ ಅಥವಾ ನೀಡಬಹುದಾಗಿದೆ. ಅದೂ ಅಲ್ಲದೆ, ಇಂಥ ವಜಾಗೊಂಡ ಉದ್ಯೋಗಿಗಳಿಗೆ ಅನುಕಂಪ ಭತ್ತೆಯನ್ನೂ ನೀಡಬಹುದಾಗಿದೆ’’ ಎಂಬುದಾಗಿ ಹೊಸ ನಿಯಮಗಳು ಹೇಳುತ್ತವೆ.





