‘ಐಟಿ ಕಂಪೆನಿಯೊಂದು ಜಗತ್ತಿಗೇ ಕನ್ನ ಹಾಕಿದೆʼಎಂಬ ವರದಿಯನ್ನು ತೆಗೆದು ಹಾಕಿದ ‘ರಾಯ್ಟರ್ಸ್’
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಜಗತ್ತಿನಾದ್ಯಂತವಿರುವ ಪ್ರಮುಖ ವ್ಯಕ್ತಿಗಳ ಮಾಹಿತಿಗಳನ್ನು ಕದ್ದಿದೆಯೆನ್ನಲಾದ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದರ ಕುರಿತ ತನ್ನ ವರದಿಯೊಂದನ್ನು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯು , ದಿಲ್ಲಿ ನ್ಯಾಯಾಲಯದ ಆದೇಶದಂತೆ ತಾತ್ಕಾಲಿಕವಾಗಿ ತೆರವುಗೊಳಿಸಿದೆ.
ಆದರೂ, ಈ ವರದಿಗೆ ತಾನು ಬದ್ಧವಾಗಿರುವುದಾಗಿಯೂ, ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿಯೂ ಸುದ್ದಿ ಸಂಸ್ಥೆ ಹೇಳಿದೆ.
‘‘ಭಾರತೀಯ ನವೋದ್ಯಮವೊಂದು ಹೇಗೆ ಜಗತ್ತಿಗೆ ಕನ್ನ ಹಾಕಿತು’’ ಎಂಬ ತಲೆಬರಹದ ವರದಿಯು ನವೆಂಬರ್ 16ರಂದು ಪ್ರಕಟಗೊಂಡಿತ್ತು. ಅದನ್ನು ಡಿಸೆಂಬರ್ 5ರಂದು ತೆಗೆಯಲಾಗಿದೆ.
ಹೊಸದಿಲ್ಲಿಯಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪೆನಿ ‘ಆ್ಯಪಿನ್’ ಬೃಹತ್ ಪ್ರಮಾಣದಲ್ಲಿ ಕನ್ನಗಾರಿಕೆ ನಡೆಸಿದೆ ಮತ್ತು ರಾಜಕೀಯ ನಾಯಕರು, ಅಂತರರಾಷ್ಟ್ರಿಯ ಕಂಪೆನಿಗಳ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಕೀಲರುಗಳಿಂದ ಮಾಹಿತಿಗಳನ್ನು ಕದ್ದಿದೆ ಎಂದು ‘ರಾಯ್ಟರ್ಸ್’ನ ವರದಿಯು ಆರೋಪಿಸಿದೆ. ಈ ಕಂಪೆನಿಯು ವ್ಯಾಪಕವಾಗಿ ಸೈಬರ್-ಮರ್ಸಿನರಿ (ಬಾಡಿಗೆ ಸಿಪಾಯಿ)ಯಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ಕಾರ್ಯಾಚರಣೆಯು ಇಡೀ ಜಗತ್ತಿಗೆ ವ್ಯಾಪಿಸಿದೆ ಎಂದು ವರದಿ ಬಣ್ಣಿಸಿದೆ.
ವರದಿಯು ‘‘ಮಾನಹಾನಿಯ ಉದ್ದೇಶವನ್ನು ಹೊಂದಿದೆ’’ ಎನ್ನುವುದು ಮೊದಲ ಓದಿನಲ್ಲೇ ಗೊತ್ತಾಗುತ್ತದೆ ಎಂದು ಡಿಸೆಂಬರ್ 4ರಂದು ದಿಲ್ಲಿಯ ರೋಹಿಣಿ ನ್ಯಾಯಾಲಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಹೇಳಿದರು. ಅದನ್ನು ‘ರಾಯ್ಟರ್ಸ್’ನ ವೆಬ್ ಸೈಟ್ ನಲ್ಲಿ ಉಳಿಸಿಕೊಳ್ಳಬಾರದು ಎಂದು ಅವರು ಹೇಳಿದರು.
ಆದರೂ, ಈ ವಿಷಯದಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸುದ್ದಿಸಂಸ್ಥೆಗೂ ಅವಕಾಶ ಸಿಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು.
ತಾನು ಈ ವರದಿಯನ್ನು ತಾತ್ಕಾಲಿಕವಾಗಿ ವೆಬ್ ಸೈಟ್ ನಿಂದ ತೆಗೆಯುತ್ತಿರುವುದಾಗಿ ರಾಯ್ಟರ್ಸ್ ಪ್ರಕಟಿಸಿದೆ. ಆದರೆ, ನೂರಾರು ಜನರೊಂದಿಗಿನ ಸಂದರ್ಶನಗಳು ಸಾವಿರಾರು ದಾಖಲೆಗಳು ಮತ್ತು ಹಲವಾರು ಸೈಬರ್ ಸುರಕ್ಷತಾ ಕಂಪೆನಿಗಳ ಸಂಶೋಧನೆಗಳ ಆಧಾರದಲ್ಲಿ ಆ ವರದಿಯನ್ನು ತಯಾರಿಸಲಾಗಿತ್ತು ಎಂದು ಅದು ಹೇಳಿದೆ.
ದಿಲ್ಲಿ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಯು ಜನವರಿ 23ರಂದು ನಡೆಯಲಿದೆ.