ಭಾರತದಲ್ಲಿ ರಾಯಿಟರ್ಸ್ ಅಧಿಕೃತ ಎಕ್ಸ್ ಖಾತೆಗೆ ನಿರ್ಬಂಧಿಸಿಲ್ಲ : ಮಾಹಿತಿ ನೀಡಿದ ಸಚಿವಾಲಯ

ಹೊಸದಿಲ್ಲಿ: ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್, ಚೀನಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಮತ್ತು ತುರ್ಕಿಯದ ಸರಕಾರಿ ಮಾಧ್ಯಮ ಸಂಸ್ಥೆ ಟಿಆರ್‌ಟಿ ವರ್ಲ್ಡ್‌ನ ಎಕ್ಸ್ ಖಾತೆಯನ್ನು ಜು.5ರ ರಾತ್ರಿಯಿಂದ ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ, ರಾಯಿಟರ್ಸ್ ಖಾತೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ʼರಾಯಿಟರ್ಸ್ ಖಾತೆಯನ್ನು ತಡೆಹಿಡಿಯುವ ಅವಶ್ಯಕತೆ ಭಾರತ ಸರಕಾರಕ್ಕೆ ಇಲ್ಲ. ಸಮಸ್ಯೆಯನ್ನು ಪರಿಹರಿಸಲು ನಾವು 'ಎಕ್ಸ್' ಜೊತೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆʼ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ರಾಯಿಟರ್ಸ್‌ನ ಎಕ್ಸ್ ಖಾತೆಯ ಜೊತೆಗೆ ನೂರಾರು ಇತರ ಖಾತೆಗಳನ್ನೂ ನಿರ್ಬಂಧಿಸುವಂತೆ ಬೇಡಿಕೆಯನ್ನು ಮಂಡಿಸಲಾಗಿತ್ತು ಮತ್ತು ಎಕ್ಸ್ ಈಗ ಈ ಬೇಡಿಕೆಗೆ ಸ್ಪಂದಿಸಿರುವಂತೆ ಕಾಣುತ್ತಿದೆ ಎಂದು ಅನಾಮಿಕ ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿತ್ತು.
ರಾಯಿಟರ್ಸ್ ಏಶ್ಯಾ, ರಾಯಿಟರ್ಸ್ ಬಿಸಿನೆಸ್ ಮತ್ತು ರಾಯಿಟರ್ಸ್ ಸೈನ್ಸ್ ನ್ಯೂಸ್‌ನಂತಹ ರಾಯಿಟರ್ಸ್‌ನ ಸಂಯೋಜಿತ ಹ್ಯಾಂಡಲ್‌ಗಳು ಈಗಲೂ ಸಾಮಾಜಿಕ ಮಾಧ್ಯಮ ತಾಣದಲ್ಲಿ ಸಿಗುತ್ತಿವೆ. ರಾಯಿಟರ್ಸ್‌ನ ವೆಬ್ ಸೈಟ್ ಕೂಡ ಲಭ್ಯವಿದೆ.
ರಾಯಿಟರ್ಸ್ ಥಾಮ್ಸನ್ ರಾಯ್ಟರ್ಸ್ನ ಸುದ್ದಿ ಮತ್ತು ಮಾಧ್ಯಮ ವಿಭಾಗವಾಗಿದ್ದು,165 ದೇಶಗಳಲ್ಲಿನ 2,600 ಪತ್ರಕರ್ತರಿಂದ ಬ್ರೇಕಿಂಗ್ ನ್ಯೂಸ್ ಮತ್ತು ಮಲ್ಟಿಮೀಡಿಯಾ ಕಂಟೆಂಟ್ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ಗ್ಲೋಬಲ್ ಟೈಮ್ಸ್ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಪತ್ರಿಕೆ ‘ಪೀಪಲ್ಸ್ ಡೈಲಿ’ಯ ಆಶ್ರಯದಲ್ಲಿ ಪ್ರಕಟಗೊಳ್ಳುತ್ತಿರುವ ಚೀನಿ ಟ್ಯಾಬ್ಲಾಯ್ಡ್ ಆಗಿದೆ.