ಮೀಸಲಾತಿ ನೀತಿಯ ಮರುಪರಿಶೀಲನೆ ಅಗತ್ಯವಿದೆ : ನ್ಯಾ.ಪಂಕಜ ಮಿತ್ತಲ್

ನ್ಯಾ.ಪಂಕಜ ಮಿತ್ತಲ್
ಹೊಸದಿಲ್ಲಿ : ಮೀಸಲಾತಿ ನೀತಿಯ ಮರುಪರಿಶೀಲನೆ ಮತ್ತು ಎಸ್ಸಿ/ಎಸ್ಟಿ ಹಾಗೂ ಒಬಿಸಿ ಸಮುದಾಯಗಳಿಗೆ ಸೇರಿದ ಜನರ ಏಳಿಗೆಗಾಗಿ ಹೊಸ ವಿಧಾನಗಳ ಅಗತ್ಯವಿದೆ ಎಂದು ಗುರುವಾರ ಒಳಮೀಸಲಾತಿಗೆ ಹಸಿರು ನಿಶಾನೆ ತೋರಿಸಿದ ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿದ್ದ ನ್ಯಾ.ಪಂಕಜ ಮಿತ್ತಲ್ ಅವರು ತನ್ನ ಪ್ರತ್ಯೇಕ ತೀರ್ಪಿನಲ್ಲಿ ಹೇಳಿದ್ದಾರೆ.
ಪರಿಶಿಷ್ಟರಲ್ಲಿ ಒಳ ಮೀಸಲಾತಿಗಳನ್ನು ನಿಗದಿಗೊಳಿಸುವ ರಾಜ್ಯಗಳ ಹಕ್ಕುಗಳ ಕುರಿತು ಬಹುಮತದ ತೀರ್ಪನ್ನು ಒಪ್ಪಿಕೊಂಡಿರುವ ನ್ಯಾ.ಮಿತ್ತಲ್,ಮೀಸಲಾತಿ ನೀತಿಯ ಯಶಸ್ಸು ಅಥವಾ ವೈಫಲ್ಯದ ಹೊರತಾಗಿಯೂ ಅದು ಅಗಾಧ ಪ್ರಮಾಣದ ದಾವೆಗಳೊಂದಿಗೆ ನ್ಯಾಯಾಲಯದ ಎಲ್ಲ ಹಂತಗಳಲ್ಲಿ, ವಿಶೇಷವಾಗಿ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಹೊರೆಯಾಗಿದೆ ಎನ್ನುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.
‘ಸಂವಿಧಾನದ ಅಡಿ ಮತ್ತು ಅದರ ವಿವಿಧ ತಿದ್ದುಪಡಿಗಳ ಮೂಲಕ ಪ್ರತಿಪಾದಿಸಲ್ಪಟ್ಟಿರುವ ಮೀಸಲಾತಿ ನೀತಿಯ ಹೊಸದಾಗಿ ಮರುಪರಿಶೀಲನೆ ಮತ್ತು ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಗಳಿಗೆ ನೆರವಾಗಲು ಮತ್ತು ಮೇಲಕ್ಕೆತ್ತಲು ಹೊಸ ವಿಧಾನಗಳನ್ನು ರೂಪಿಸುವ ಅಗತ್ಯವಿದೆ. ಈವರೆಗೆ ಯಾವುದೇ ಹೊಸವಿಧಾನವನ್ನು ರೂಪಿಸಲಾಗಿಲ್ಲ ಅಥವಾ ಅಳವಡಿಸಿಕೊಂಡಿಲ್ಲ,ಚಾಲ್ತಿಯಲ್ಲಿರುವ ಮೀಸಲಾತಿ ವ್ಯವಸ್ಥೆಯು ಒಂದು ವರ್ಗದ,ನಿರ್ದಿಷ್ಟವಾಗಿ ಪರಿಶಿಷ್ಟ ವರ್ಗದ ಉಪವರ್ಗೀಕರಣವನ್ನು ಅನುಮತಿಸುವ ಅಧಿಕಾರದೊಂದಿಗೆ ಮುಂದುವರಿಯಬಹುದು. ಇನ್ನಷ್ಟು ಹೆಚ್ಚು ಉಪಯುಕ್ತವಾದ ಹೊಸದನ್ನು ರೂಪಿಸದೇ ಇರುವುದನ್ನು ಕಿತ್ತುಹಾಕಲು ನಾನು ಸೂಚಿಸುವುದಿಲ್ಲ ’ಎಂದು ನ್ಯಾ.ಮಿತ್ತಲ್ ತನ್ನ ಪ್ರತ್ಯೇಕ 51 ಪುಟಗಳ ತೀರ್ಪಿನಲ್ಲಿ ಹೇಳಿದ್ದಾರೆ.
ಸಾಂವಿಧಾನಿಕ ಆಡಳಿತದಲ್ಲಿ ಯಾವುದೇ ಜಾತಿ ವ್ಯವಸ್ಥೆಯಿಲ್ಲ ಮತ್ತು ಶೋಷಿತ ವರ್ಗಗಳು ಅಥವಾ ಎಸ್ಸಿ/ಎಸ್ಟಿ/ಒಬಿಸಿಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿಯನ್ನು ಒದಗಿಸುವ ಸೀಮಿತ ಉದ್ದೇಶಗಳನ್ನು ಹೊರತುಪಡಿಸಿ ದೇಶವು ಜಾತಿರಹಿತ ಸಮಾಜದತ್ತ ಸಾಗಿದೆ ಎಂದೂ ನ್ಯಾ.ಮಿತ್ತಲ್ ಹೇಳಿದ್ದಾರೆ.







