ಆರ್.ಜಿ. ಕರ್ ಅತ್ಯಾಚಾರ-ಕೊಲೆ ಪ್ರಕರಣ | ಮರಣ ದಂಡನೆ ಕೋರುವ ಪಶ್ಚಿಮ ಬಂಗಾಳದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್

ಸಂಜಯ್ ರಾಯ್ | PC: PTI
ಕೋಲ್ಕತಾ: ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ದೋಷಿ ಎಂದು ಘೋಷಿಸಿರುವ ಸಂಜಯ್ ರಾಯ್ಗೆ ಮರಣ ದಂಡನೆ ವಿಧಿಸಬೇಕೆಂದು ಕೋರಿ ಪಶ್ಚಿಮ ಬಂಗಾಳ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಆದರೆ, ಇದೇ ಮನವಿಯನ್ನು ಒಳಗೊಂಡ ಸಿಬಿಐ ಅರ್ಜಿಯನ್ನು ಅದು ವಿಚಾರಣೆಗೆ ಸ್ವೀಕರಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಜನವರಿ 20ರಂದು ಪ್ರಕರಣದ ಆರೋಪಿ ರಾಯ್ಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿದ್ದರು. ಮರಣ ದಂಡನೆ ವಿಧಿಸಲು ಅದು ‘‘ಅಪರೂಪದಲ್ಲೇ ಅಪರೂಪದ’’ ಪ್ರಕರಣವಲ್ಲ ಎಂದು ಅವರು ಹೇಳಿದ್ದರು.
ಆರೋಪಿಗೆ ಮರಣ ದಂಡನೆ ವಿಧಿಸಬೇಕೆಂದು ಕೋರಿ ರಾಜ್ಯ ಸರಕಾರ ಮತ್ತು ಸಿಬಿಐ ಪ್ರತ್ಯೇಕವಾಗಿ ಹೈಕೋರ್ಟ್ಗೆ ಹೋಗಿದ್ದವು. ಒಂದೇ ಕೋರಿಕೆ ಇರುವ ಅರ್ಜಿಗಳನ್ನು ಎರಡು ಸಂಸ್ಥೆಗಳು ಯಾಕೆ ಸಲ್ಲಿಸಿವೆ ಎಂದು ಹೈಕೋರ್ಟ್ ಪ್ರಶ್ನಿಸಿತು.
ಪ್ರಕರಣದ ಸಂಪೂರ್ಣ ತನಿಖೆಯನ್ನು ತಾನು ಮಾಡಿರುವುದರಿಂದ, ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇದೆ ಎಂದು ಸಿಬಿಐ ವಾದಿಸಿತು.
ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ಪ್ರಕರಣಗಳಲ್ಲಿ ಕೇಂದ್ರ ಸರಕಾರವು ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಸರಕಾರದ ವಕೀಲರು ಹೇಳಿದರು. ಅದೇ ವೇಳೆ, ಇಂಥ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕು ರಾಜ್ಯ ಸರಕಾರಕ್ಕೂ ಇದೆ ಎಂದು ಅವರು ವಾದಿಸಿದರು.
ದಾರುಣ ಘಟನೆ ಕಳೆದ ವರ್ಷದ ಆಗಸ್ಟ್ 9ರಂದು ನಡೆದಿತ್ತು. ಕೋಲ್ಕತಾ ಪೊಲೀಸರು ಆರೋಪಿ ರಾಯ್ನನ್ನು ಬಂಧಿಸಿದ್ದರು. ಬಳಿಕ, ಹೈಕೋರ್ಟ್ನ ಆದೇಶದಂತೆ ಪ್ರಕರಣದ ತನಿಖೆಯನ್ನು ಆಗಸ್ಟ್ 13ರಂದು ಸಿಬಿಐಗೆ ಹಸ್ತಾಂತರಿಸಲಾಗಿತ್ತು.







