ಅಲಿಗಢ ಉದ್ಯಮಿಯ ಕೊಲೆ ಪ್ರಕರಣ: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ

Photo Credit : hindustantimes
ಲಕ್ನೋ,ಅ.11: ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ)ದ ಪದಾಧಿಕಾರಿ ಹಾಗೂ ಉತ್ತರಪ್ರದೇಶದ ಆಲಿಗಢದ ಉದ್ಯಮಿಯ ಕೊಲೆ ಪ್ರಕರಣದ ಮುಖ್ಯ ಆರೋಪಿ ಪೂಜಾ ಶಕುನ್ ಪಾಂಡೆಯನ್ನು ರಾಜಸ್ಥಾನದ ಭರತಪುರದಲ್ಲಿ ಶನಿವಾರ ಬಂಧಿಸಲಾಗಿದೆ.
25 ವರ್ಷ ವಯಸ್ಸಿನ ದ್ವಿಚಕ್ರ ವಾಹನ ಶೋರೂಂ ಮಾಲಕ ಅಭಿಷೇಕ್ ಗುಪ್ತಾರನ್ನು ಅಲಿಗಢಢದ ರೊರಾವರ್ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಗುಪ್ತಾ ಅವರನ್ನು ಹತ್ಯೆಗೈಯಲು ಪೂಜಾ ಶಕುನ್ ಪಾಂಡೆ ಹಾಗೂ ಆಕೆಯ ಪತಿ, ಎಬಿಎಚ್ಎಂನ ವಕ್ತಾರ ಅಶೋಕ್ ಪಾಂಡೆ ಅವರು ಶೂಟರ್ಗಳಾದ ಮೊಹಮ್ಮದ್ ಫಾಝಲ್ ಹಾಗೂ ಆಸೀಫ್ ಎಂಬಾತನನ್ನು ಗೊತ್ತುಪಡಿಸಿದ್ದರು ಎಂದು ಆರೋಪಿಸಲಾಗಿದೆ.
ಕೊಲೆ ನಡೆದ ರಾತ್ರಿಯೇ ರೊರಾವರ್ ಪೊಲೀಸ್ ಠಾಣೆಯಲ್ಲಿ ಪೂಜಾ ಹಾಗೂ ಆಕೆಯ ಪತಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲಿಗಢದ ಹಿರಿಯ ಪೊಲೀಸ್ ಆಧೀಕ್ಷಕ (ಎಸ್ಎಸ್ಪಿ) ನೀರಜ್ ಕುಮಾರ್ ಜಾದಾವುನ್ ಅವರು ಪೂಜಾಳನ್ನು ಶುಕ್ರವಾರ ತಡರಾತ್ರಿ ಭರತಪುರದಲ್ಲಿ ಬಂಧಿಸಿದ್ದಾರೆ.
ಪೂಜಾ, ಕೆಲವು ಸಮಯದಿಂದ ಅಭಿಷೇಕ್ ಗೆ ಲೈಂಗಿಕವಾಗಿ ಪೀಡಿಸುತ್ತಿದ್ದಳು. ಅಭಿಷೇಕ್ ಆಕೆಯೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡ ಆನಂತರ ಆತನನ್ನು ಕೊಲೆಗೈಯಲು ಸಂಚು ಹೂಡಲಾಗಿತ್ತು ಎಂದು ಮೃತರ ಬಂಧುಗಳು ಆಪಾದಿಸಿದ್ದಾರೆ.
ಉದ್ಯಮಕ್ಕೆ ಸಂಬಂಧಿಸಿದ ವಿಷಯದಲ್ಲಿ ಪೂಜಾ ಹಾಗೂ ಅಭಿಷೇಕ್ ನಡುವೆ ವೈಮನಸ್ಸು ಉಂಟಾಗಿದ್ದುದೇ ಕೊಲೆಗೆ ಕಾರಣವಾಯಿತುಎಂದು ಪೊಲೀಸರು ಆಪಾದಿಸಿದ್ದಾರೆ. ಅಶೋಕ್ ಪಾಂಡೆ ಹಾಗೂ ಇಬ್ಬರು ಶೂಟರ್ಗಳು ಈಗಾಗಲೇ ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾಮಂಡಲೇಶ್ವರಿ ಎಂಬ ಧಾರ್ಮಿಕ ಬಿರುದನ್ನು ಹೊಂದಿದ್ದ ಪೂಜಾ ಶಕುನ್ ಪಾಂಡೆ, ‘ಅನ್ನಪೂರ್ಣಾ ಮಾ’ ಎಂಬುದಾಗಿಯೂ ಕರೆಸಿಕೊಳ್ಳುತ್ತಿದ್ದಳು.ಅಭಿಷೇಕ್ ಹತ್ಯೆ ಬಳಿಕ ತಲೆ ಮರೆಸಿಕೊಂಡಿದ್ದ ಆಕೆಯ ಬಂಧನಕ್ಕೆ 50 ಸಾವಿರ ಬಹುಮಾನ ಘೋಷಿಸಲಾಗಿತ್ತು.







