ದಿಲ್ಲಿ ಸಿಎಂ ಕೇಜ್ರಿವಾಲ್ಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶೆ ವಿರುದ್ಧ ಬಲಪಂಥೀಯರಿಂದ ಟ್ರೋಲ್

ಅರವಿಂದ್ ಕೇಜ್ರಿವಾಲ್ , ನ್ಯಾಯಾಧೀಶೆ ನ್ಯಾಯ ಬಿಂದು | PC : PTI
ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡುವ ತನ್ನ ನಿರ್ಧಾರದ ಬಳಿಕ ದಿಲ್ಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ನಿಯಾಯ್ ಬಿಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರಿಂದ ಟೀಕೆಗಳಿಗೆ ಗುರಿಯಾಗಿದ್ದಾರೆ.
ನ್ಯಾಯಾಧೀಶರು ತನ್ನ ನಿರ್ಧಾರಕ್ಕೆ ಮುನ್ನ ಜಾರಿ ನಿರ್ದೇಶನಾಲಯ (ಈಡಿ) ಸಲ್ಲಿಸಿದ್ದ ದಾಖಲೆಗಳನ್ನು ವಿವರವಾಗಿ ಪರಿಶೀಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಈ ಎಕ್ಸ್ ಖಾತೆಗಳು ಆರೋಪಿಸಿವೆ.
ಕೇಜ್ರಿವಾಲ್ಗೆ ಜಾಮೀನು ಮಂಜೂರು ಮಾಡಿದ್ದ ನ್ಯಾ. ಬಿಂದು ಅವರ ನಿರ್ಧಾರವನ್ನು ಬಿಜೆಪಿ ಬೆಂಬಲಿಗರು ಮತ್ತು ಅವರೊಂದಿಗೆ ಗುರುತಿಸಿಕೊಂಡಿರುವವರು ತಿರಸ್ಕರಿಸಿದ್ದಾರೆ. ಈ ವ್ಯಕ್ತಿಗಳು ನ್ಯಾಯಾಧೀಶರ ಶ್ರದ್ಧೆ ಮತ್ತು ನಿಷ್ಪಕ್ಷತೆಯನ್ನು ಪ್ರಶ್ನಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೇರ್ ಅವರು ಹಲವಾರು ಟೀಕಾತ್ಮಕ ಟ್ವೀಟ್ಗಳ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಳ್ಳುವ ಮೂಲಕ ಆನ್ಲೈನ್ ದಾಳಿಗಳ ಅಲೆಯನ್ನು ಎತ್ತಿ ತೋರಿಸಿದ್ದಾರೆ. ದಿಲ್ಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಬಿಂದು ಅವರು ತಾವು ಮತ್ತು ತಮ್ಮ ನಾಯಕರು ಇಷ್ಟಪಡದ ತೀರ್ಪನ್ನು ನೀಡಿದ್ದರಿಂದ ಬಲಪಂಥೀಯ ಎಕ್ಸ್ ಖಾತೆಗಳಿಂದ ಟ್ವೀಟ್ಗಳು ಅವರನ್ನು ಗುರಿಯಾಗಿಸಿಕೊಂಡಿವೆ. ಇದು ಅಪಾಯಕಾರಿ ಮತ್ತು ಭಯಾನಕವಾಗಿದೆ ಎಂದು ಝುಬೇರ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ನ್ಯಾ. ಬಿಂದು ಅವರ ಬೆಂಬಲಿಗರು ಟೀಕಾಕಾರರು ತಪ್ಪಾಗಿ ಅರ್ಥೈಸಿಕೊಂಡಿರುವ ಜಾಮೀನು ವಿಚಾರಣೆಗಳಲ್ಲಿಯ ಕಾನೂನು ಪ್ರಕ್ರಿಯೆಗಳನ್ನು ಸ್ಪಷ್ಟಪಡಿಸಲು ಮುಂದಾಗಿದ್ದಾರೆ.
ಝುಬೇರ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರರು ವಿವರಣೆಗಳನ್ನು ನೀಡಿದ್ದಾರೆ.
1.ಜಾಮೀನು ವಿಚಾರಣೆಗಳ ವ್ಯಾಪ್ತಿ: ಜಾಮೀನು ವಿಚಾರಣೆಗಳು ಸಲ್ಲಿಸಲಾದ ಎಲ್ಲ ದಾಖಲೆಗಳ ವಿವರವಾದ ಪರಿಶೀಲನೆಗಿಂತ ಮುಖ್ಯವಾಗಿ ಎರಡೂ ಕಡೆಗಳು ಮಂಡಿಸಿದ ವಾದಗಳು ಮತ್ತು ಸಲ್ಲಿಸಿದ ಪ್ರಮುಖ ಸಾಕ್ಷ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ.
2.ನ್ಯಾಯಾಂಗ ದಕ್ಷತೆ: ದಾಖಲೆಗಳು ಬೃಹತ್ ಪ್ರಮಾಣದಲ್ಲಿ ಇರುವುದನ್ನು ಒಪ್ಪಿಕೊಂಡ ನ್ಯಾಯಾಧೀಶರು,ಆದರೆ ಈ ಹಂತದಲ್ಲಿ ಸಾವಿರಾರು ಪುಟಗಳನ್ನು ಪರಿಶೀಲಿಸುವ ಅಪ್ರಾಯೋಗಿಕತೆಯನ್ನು ಒತ್ತಿ ಹೇಳಿದ್ದಾರೆ. ಇದು ಕರ್ತವ್ಯದ ನಿರ್ಲಕ್ಷ್ಯವನ್ನು ಸೂಚಿಸುವುದಿಲ್ಲ,ಆದರೆ ಜಾಮೀನು ನಿರ್ಧಾರಗಳಿಗೆ ಸಂಬಂಧಿತ ವಿಷಯಗಳ ಮೇಲೆ ಗಮನ ಕೇಂದ್ರೀಕರಣವನ್ನು ತೋರಿಸುತ್ತದೆ. ಅಲ್ಲದೆ ಸೆಷನ್ಸ್ ನ್ಯಾಯಾಧೀಶೆ ಸ್ವರ್ಣ ಕಾಂತಾ ಅವರು ಮನೀಷ್ ಸಿಸೋಡಿಯ ಇತರ ಆಪ್ ನಾಯಕರಿಗೆ ಜಾಮೀನು ತಿರಸ್ಕರಿಸುವಾಗ ಎಲ್ಲ 55,000 ದಾಖಲೆಗಳನ್ನು ಓದಿದ್ದರೇ?
ಪ್ರಕರಣದ ಎಲ್ಲ ದಾಖಲೆಗಳ ಸಮಗ್ರ ವಿಶ್ಲೇಷಣೆಗಿಂತ ಹೆಚ್ಚಾಗಿ ನಿರ್ಣಾಯಕ ಸಾಕ್ಷ್ಯ ಮತ್ತು ವಾದಗಳನ್ನು ಅವಲಂಬಿಸಿ ಜಾಮೀನಿಗೆ ಸಂಬಂಧಿಸಿದ ತಕ್ಷಣದ ಕಳವಳಗಳನ್ನು ಪರಿಹರಿಸಲು ಜಾಮೀನು ವಿಚಾರಣೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಬಳಕೆದಾರರು ಒತ್ತಿ ಹೇಳಿದ್ದಾರೆ.
ಅವರ ಈ ದೃಷ್ಟಿಕೋನವನ್ನು ಹಂಚಿಕೊಂಡಿರುವ ಹಲವಾರು ಕಾನೂನು ತಜ್ಞರು,ಇಂತಹ ವಿಚಾರಣೆಗಳಲ್ಲಿ ನ್ಯಾಯಾಧೀಶರ ಪಾತ್ರವು ಪ್ರಕರಣದ ಸಂಪೂರ್ಣ ಆಳಕ್ಕಿಳಿಯುವ ಬದಲು ಜಾಮೀನಿನ ಅಗತ್ಯ ಮತ್ತು ಸಮರ್ಥನೆಯನ್ನು ತೂಗಿ ನೋಡುವುದಾಗಿದೆ ಮತ್ತು ಇದು ವಿಚಾರಣೆಯ ಸಂದರ್ಭದಲ್ಲಿ ಹೆಚ್ಚು ಸೂಕ್ತವಾಗುತ್ತದೆ ಎಂದು ವಾದಿಸಿದ್ದಾರೆ.
ನ್ಯಾ.ಬಿಂದು ವಿರುದ್ಧ ಆನ್ಲೈನ್ ಟೀಕೆಗಳು ಸಾಮಾಜಿಕ ಮಾಧ್ಯಮಗಳಿಂದ ನ್ಯಾಯಾಂಗದ ಮೇಲೆ ಹೆಚ್ಚುತ್ತಿರುವ ಒತ್ತಡದ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. ಇಂತಹ ಅಭಿಯಾನಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆ ಎಂದು ಬಳಕೆದಾರರು ವಾದಿಸಿದ್ದಾರೆ.