ದೇಶದಲ್ಲಿ ಶೇ.47ರಷ್ಟು ಸಚಿವರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ: ಎಡಿಆರ್

ಹೊಸದಿಲ್ಲಿ,ಸೆ.4: ದೇಶದಲ್ಲಿಯ ಸುಮಾರು ಶೇ.47ರಷ್ಟು ಸಚಿವರು ತಮ್ಮ ವಿರುದ್ಧ ಕೊಲೆ,ಅಪಹರಣ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಂತಹ ಗಂಭೀರ ಆರೋಪಗಳು ಸೇರಿದಂತೆ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ತನ್ನ ವಿಶ್ಲೇಷಣಾ ವರದಿಯಲ್ಲಿ ಬೆಟ್ಟು ಮಾಡಿದೆ.
ಗಂಭೀರ ಕ್ರಿಮಿನಲ್ ಆರೋಪಗಳಲ್ಲಿ ಕನಿಷ್ಠ 30 ದಿನಗಳ ಜೈಲುವಾಸ ಅನುಭವಿಸಿರುವ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಪದಚ್ಯುತಗೊಳಿಸಲು ಮೂರು ಮಸೂದೆಗಳನ್ನು ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಬಳಿಕ ಈ ವರದಿ ಹೊರಬಿದ್ದಿದೆ.
27 ರಾಜ್ಯ ವಿಧಾನಸಭೆಗಳು, ಮೂರು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಪುಟದ 643 ಸಚಿವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ಗಳನ್ನು ಪರಿಶೀಲಿಸಿರುವ ಎಡಿಆರ್, 302(ಶೇ.47) ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದನ್ನು ಕಂಡುಕೊಂಡಿದೆ. ಈ ಪೈಕಿ 174 ಸಚಿವರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಪಕ್ಷವಾರು ಸಚಿವರ ವಿವರ: ಪಕ್ಷ ಒಟ್ಟು ಸಚಿವರು ಕ್ರಿಮಿನಲ್ ಗಂಭೀರ ಆರೋಪ ಪ್ರಕರಣಗಳಿರುವವರು ಎದುರಿಸುತ್ತಿರುವವರು
ಬಿಜೆಪಿ 336 136(ಶೇ.40) 88(ಶೇ.26)
ಕಾಂಗ್ರೆಸ್ 61 45(ಶೇ.74) 18(ಶೇ.30)
ಡಿಎಂಕೆ 31 27(ಶೇ.87) 14(ಶೇ.45)
ಟಿಎಂಸಿ 40 13(ಶೇ.33) 8(ಶೇ.20)
ಟಿಡಿಪಿ 23 22(ಶೇ.96) 13(ಶೇ.57)
ಆಪ್ 16 11(ಶೇ.69) 5(ಶೇ.31)
72 ಕೇಂದ್ರ ಸಚಿವರ ಪೈಕಿ 29 (ಶೇ.40) ಸಚಿವರು ತಮ್ಮ ಅಫಿಡವಿಟ್ ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು,!ಬಿಹಾರ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ತೆಲಂಗಾಣ, ಹಿಮಾಚಲ ಪ್ರದೇಶ, ದಿಲ್ಲಿ ಮತ್ತು ಪುದುಚೇರಿ ಸೇರಿದಂತೆ 11 ವಿಧಾನಸಭೆಗಳಲ್ಲಿ ಶೇ.60ಕ್ಕೂ ಅಧಿಕ ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಹರ್ಯಾಣ, ಜಮ್ಮುಕಾಶ್ಮೀರ, ನಾಗಾಲ್ಯಾಂಡ್ ಮತ್ತು ಉತ್ತರಾಂಚಲದಲ್ಲಿಯ ಸಚಿವರು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಘೋಷಿಸಿದ್ದಾರೆ.
ಎಡಿಆರ್ ಸಚಿವರ ಶ್ರೀಮಂತಿಕೆಯನ್ನೂ ವಿಶ್ಲೇಷಿಸಿದೆ. ಸಚಿವರು ಸರಾಸರಿ 37.21 ಕೋ.ರೂ.ಆಸ್ತಿಗಳನ್ನು ಹೊಂದಿದ್ದು, ಎಲ್ಲ 643 ಸಚಿವರ ಒಟ್ಟು ಆಸ್ತಿ 23,929 ಕೋ.ರೂ.ಗಳಷ್ಟಿದೆ.
30 ವಿಧಾನಸಭೆಗಳ ಪೈಕಿ 11ರಲ್ಲಿ ಶತಕೋಟ್ಯಾಧಿಪತಿ ಸಚಿವರಿದ್ದು, ಎಂಟು ಶತಕೋಟ್ಯಾಧಿಪತಿಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ(6) ಮತ್ತು ಮಹಾರಾಷ್ಟ್ರ(4) ಇವೆ. ಹರ್ಯಾಣ,ದಿಲ್ಲಿ,ಅರುಣಾಚಲ ಪ್ರದೇಶ ಮತ್ತು ತೆಲಂಗಾಣ ತಲಾ ಇಬ್ಬರು ಹಾಗೂ ಗುಜರಾತ,ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಪಂಜಾಬ್ ತಲಾ ಓರ್ವ ಶತಕೋಟ್ಯಾಧಿಪತಿ ಸಚಿವರನ್ನು ಹೊಂದಿವೆ. ಕೇಂದ್ರ ಸರಕಾರದ 72 ಸಚಿವರ ಪೈಕಿ ಆರು (ಶೇ.8) ಜನರು ಕೋಟ್ಯಾಧಿಪತಿಗಳಾಗಿದ್ದಾರೆ.
14 ಕೋಟ್ಯಾಧಿಪತಿಗಳೊಂದಿಗೆ ಬಿಜೆಪಿ ಅಗ್ರಸ್ಥಾನದಲ್ಲಿದ್ದರೆ ಕಾಂಗ್ರೆಸ್(11),ಟಿಡಿಪಿ(6) ನಂತರದ ಸ್ಥಾನಗಳಲ್ಲಿವೆ.
ಲೋಕಸಭೆಯಲ್ಲಿ ಆಂಧ್ರಪ್ರದೇಶದ ಗುಂಟೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಟಿಡಿಪಿ ಸಂಸದ ಡಾ.ಚಂದ್ರಶೇಖರ ಪೆಮ್ಮಸಾನಿ 5,705 ಕೋ.ರೂ.ಗೂ ಅಧಿಕ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಚಿವರಾಗಿದ್ದರೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ (1,413 ಕೋ.ರೂ.ಗೂ ಹೆಚ್ಚು) ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು(931 ಕೋ.ರೂ.ಗೂ ಹೆಚ್ಚು) ನಂತರದ ಸ್ಥಾನಗಳಲ್ಲಿದ್ದಾರೆ.
► ಅತ್ಯಂತ ಬಡ ಸಚಿವರು
ತ್ರಿಪುರಾದ ಸುಕಲಾ ಚರಣ್ ನೋತಿಯಾ(ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್) ಕೇವಲ ಎರಡು ಲ.ರೂ. ಮತ್ತು ಪ.ಬಂಗಾಳ ಸಚಿವ ಬಿರ್ಬಹಾ ಹಂಸ್ಡಾ(ಟಿಎಂಸಿ) ಮೂರು ಲ.ರೂ.ಗಳ ಆಸ್ತಿಗಳನ್ನು ಘೋಷಿಸಿಕೊಂಡಿದ್ದಾರೆ.







