ಮತ್ತೊಂದು ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿ ರಿಷಭ್ ಪಂತ್

ರಿಷಭ್ ಪಂತ್ | PC : PTI
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಎಜ್ಬಾಸ್ಟನ್ನಲ್ಲಿ ಜುಲೈ 2ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ ರಿಷಭ್ ಪಂತ್ ಪ್ರವಾಸಿ ಬ್ಯಾಟರ್ಗಳ ಇಲೈಟ್ ಕ್ಲಬ್ಗೆ ಸೇರ್ಪಡೆಯಾಗುವ ವಿಶ್ವಾಸದಲ್ಲಿದ್ದಾರೆ.
ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಗಳಿಸಿರುವ 26ರ ಹರೆಯದ ವಿಕೆಟ್ಕೀಪರ್-ಬ್ಯಾಟರ್ ಇನ್ನೊಂದು ಶತಕ ಗಳಿಸಿದರೆ, ಬ್ರಾಡ್ಮನ್, ರಾಹುಲ್ ದ್ರಾವಿಡ್ ಹಾಗೂ ಬ್ರಿಯಾನ್ ಲಾರಾ ಅವರನ್ನೊಳಗೊಂಡ ಲೆಜೆಂಡರಿ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ಲೀಡ್ಸ್ ಟೆಸ್ಟ್ನಲ್ಲಿ ಪಂತ್ ಅವರು 134 ಹಾಗೂ 118 ರನ್ ಗಳಿಸಿದ್ದು, ಎರಡೂ ಇನಿಂಗ್ಸ್ಗಳಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇಂಗ್ಲೆಂಡ್ ಗೆಲುವಿಗೆ 371 ರನ್ ಗುರಿ ನೀಡಿದ ಹೊರತಾಗಿಯೂ ಭಾರತ ತಂಡವು 5 ವಿಕೆಟ್ಗಳಿಂದ ಸೋತಿತ್ತು. ಈ ಪಂದ್ಯ ಸೋತ ಹೊರತಾಗಿಯೂ ಪಂತ್ ಅವರ ದಿಟ್ಟ ಬ್ಯಾಟಿಂಗ್ ಪಂದ್ಯದ ಹೈಲೈಟ್ ಆಗಿತ್ತು.
ಪಂತ್ ಇದೀಗ ಇಂಗ್ಲೆಂಡ್ ನೆಲದಲ್ಲಿ 10 ಟೆಸ್ಟ್ ಪಂದ್ಯಗಳಲ್ಲಿ 42.52ರ ಸರಾಸರಿಯಲ್ಲಿ 4 ಶತಕಗಳ ಸಹಿತ ಒಟ್ಟು 808 ರನ್ ಗಳಿಸಿದ್ದಾರೆ. 2022ರಲ್ಲಿ ಎಜ್ಬಾಸ್ಟನ್ನಲ್ಲಿ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದ್ದು, ಇದು ಇಂಗ್ಲೆಂಡ್ ನೆಲದಲ್ಲಿ ಪಂತ್ ಗಳಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. 2022ರಲ್ಲಿ ಭಾರತವು 98 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ತಂಡವನ್ನು ಆಧರಿಸಿದ್ದ ಪಂತ್ ಅವರು ಭಾರತವು ಮೊದಲ ಇನಿಂಗ್ಸ್ನಲ್ಲಿ 416 ರನ್ ಗಳಿಸುವಲ್ಲಿ ನೆರವಾಗಿದ್ದರು. ಅಂತಿಮವಾಗಿ ಈ ಪಂದ್ಯವನ್ನು ಭಾರತವು ಸೋತಿದ್ದರೂ ಪಂತ್ ಇನಿಂಗ್ಸ್ ವಿದೇಶಿ ನೆಲದಲ್ಲಿ ಭಾರತೀಯ ವಿಕೆಟ್ಕೀಪರ್ನ ಶ್ರೇಷ್ಠ ಪ್ರದರ್ಶನವಾಗಿ ಉಳಿದಿದೆ.
ಪಂತ್ ಅವರು ಎಜ್ಬಾಸ್ಟನ್ನಲ್ಲಿ ಮತ್ತೊಮ್ಮೆ ಮೂರಂಕೆ ಗಳಿಸಿದರೆ ಇಂಗ್ಲೆಂಡ್ನಲ್ಲಿ ಸತತ 3 ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಪ್ರವಾಸಿ ತಂಡದ 7ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ವಿಶೇಷ ಪಟ್ಟಿಯಲ್ಲಿ ಡಾನ್ ಬ್ರಾಡ್ಮನ್, ವಾರೆನ್ ಬಾರ್ಡ್ಸ್ಲೇ, ಚಾರ್ಲ್ಸ್ ಮೆಕಾರ್ಟ್ನಿ, ಬ್ರಿಯಾನ್ ಲಾರಾ, ರಾಹುಲ್ ದ್ರಾವಿಡ್ ಹಾಗೂ ಡ್ಯಾರಿಲ್ ಮಿಚೆಲ್ ಅವರಿದ್ದಾರೆ. ದ್ರಾವಿಡ್ ಪಟ್ಟಿಯಲ್ಲಿರುವ ಏಕೈಕ ಭಾರತೀಯನಾಗಿದ್ದು, 2002ರಲ್ಲಿ ದ್ರಾವಿಡ್ ಈ ಸಾಧನೆ ಮಾಡಿದ್ದರು.
ಭಾರತೀಯ ವಿಕೆಟ್ಕೀಪರ್ ಆಗಿ ಈಗಾಗಲೆ ಗರಿಷ್ಠ ಶತಕಗಳನ್ನು ಗಳಿಸಿರುವ ಪಂತ್ಗೆ ಇತಿಹಾಸದ ಪುಟದಲ್ಲಿ ತನ್ನ ಹೆಸರು ಅಚ್ಚೊತ್ತಲು ಮತ್ತೊಂದು ಸುವರ್ಣಾವಕಾಶ ಲಭಿಸಿದೆ.







