ಬಿಹಾರ | ಮತ ಎಣಿಕೆ ಕೇಂದ್ರಕ್ಕೆ ಇವಿಎಂ ತುಂಬಿದ ಟ್ರಕ್ ರಹಸ್ಯ ಪ್ರವೇಶ : ಆರ್‌ಜೆಡಿ ಆರೋಪ

ಪಾಟ್ನಾ, ನ. 13: ಮತ ಎಣಿಕೆಗೆ ಮುನ್ನ ಇವಿಎಂಗಳನ್ನು ತುಂಬಿದ್ದ ಟ್ರಕ್ಕೊಂದು ಸಾಸಾರಾಮ್ ಮತ ಎಣಿಕೆ ಕೇಂದ್ರಕ್ಕೆ ರಹಸ್ಯವಾಗಿ ಪ್ರವೇಶಿದೆ ಎಂದು ಆರ್‌ಜೆಡಿ ಗುರುವಾರ ಆರೋಪಿಸಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಆರ್‌ಜೆಡಿ ಆಗ್ರಹಿಸಿದೆ. ಆರ್‌ಜೆಡಿ ಕಾರ್ಯಕರ್ತರು ಬುಧವಾರ ರಾತ್ರಿ ವಜ್ರ ಗೃಹ ಮತ ಎಣಿಕೆ ಸಂಕೀರ್ಣದ ಹೊರಗೆ ಸೇರಿದರು ಹಾಗೂ ಚುನಾವಣಾ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾಸಾರಾಮ್ ಮತ ಎಣಿಕೆ ಕೇಂದ್ರದ ಆವರಣದಲ್ಲಿರುವ ಸಿಸಿಟಿವಿ ಕೆಮೆರಾಗಳನ್ನು ಅಪರಾಹ್ನ 2 ಗಂಟೆಗೆ ಸ್ವಿಚ್ ಆಫ್ ಮಾಡಲಾಯಿತು. ಇದು ಟ್ರಕ್ ಯಾವುದೇ ಅಧಿಕೃತತೆ ಹಾಗೂ ದಾಖಲೆಗಳಿಲ್ಲದೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಆರ್‌ಜೆಡಿ, ಚುನಾವಣಾ ಆಯೋಗದ ಮೌನವನ್ನು ಪ್ರಶ್ನಿಸಿದೆ. ಮತದಾನ ಮುಗಿದ ನಂತರ ಇವಿಎಂಗಳನ್ನು ಏಕೆ ಸ್ಥಳಾಂತರಿಸಲಾಯಿತು ಎಂದು ಅದು ಕೇಳಿದೆ. ಅಲ್ಲದೆ, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಈ ವಿಷಯವನ್ನು ಪಾರದರ್ಶಕವಾಗಿ ನಿರ್ವಹಿಸದೇ ಇದ್ದರೆ, ಜನಾದೇಶವನ್ನು ರಕ್ಷಿಸಲು ಬಿಹಾರದಾದ್ಯಂತ ಮತ ಎಣಿಕೆ ಕೇಂದ್ರಗಳ ಎದುರು ಬೆಂಬಲಿಗರನ್ನು ಸಂಘಟಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಆರ್‌ಜೆಡಿ ಎಚ್ಚರಿಸಿದೆ.
ಈ ಆರೋಪವನ್ನು ರೋಹ್ತಾಸ್‌ನ ಜಿಲ್ಲಾಡಳಿತ ನಿರಾಕರಿಸಿದೆ. ಅದು ಖಾಲಿ ಪೆಟ್ಟಿಗೆ ಎಂದು ಜಿಲ್ಲಾಧಿಕಾರಿ ಉದಿತ್ ಸಿಂಗ್ ಹೇಳಿದ್ದಾರೆ.







