ಬಿಹಾರ: ʼಮಹಾಘಟಬಂಧನ್ʼ ಸೀಟು ಹಂಚಿಕೆ ಬಿಕ್ಕಟ್ಟು ನಡುವೆಯೇ 143 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆರ್ಜೆಡಿ

Photo credit: PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳಿದ್ದರೂ, ಮಹಾಘಟಬಂಧನ್ ಮೈತ್ರಿಕೂಟದ ಸೀಟು ಹಂಚಿಕೆ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಇದರ ಬೆನ್ನಿಗೇ, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಒಂದು ದಿನ ಮಾತ್ರ ಬಾಕಿ ಇರುವಾಗ, ರಾಷ್ಟ್ರೀಯ ಜನತಾ ದಳ (RJD) ಒಟ್ಟು 143 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ವೈಶಾಲಿ ಜಿಲ್ಲೆಯ ರಘೋಪುರ್ ವಿಧಾನಸಭಾ ಕ್ಷೇತ್ರದಿಂದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕಣಕ್ಕಿಳಿದಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯು ನವೆಂಬರ್ 6 ಹಾಗೂ 11ರಂದು ನಿಗದಿಯಾಗಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಮುಂದುವರಿದಿದ್ದ ಸೀಟು ಹಂಚಿಕೆ ಬಿಕ್ಕಟ್ಟಿನ ಕಾರಣ, RJD ಇದುವರೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ.
2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಯಲ್ಲಿ RJD ಒಂದು ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. 2020ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ RJD 144 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಈ ಬಾರಿ 143 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಈ ಪೈಕಿ ರಘೋಪುರ್ ವಿಧಾನಸಭಾ ಕ್ಷೇತ್ರದಿಂದ ತೇಜಸ್ವಿ ಯಾದವ್, ಮಾಧೇಪುರ್ ನಿಂದ ಚಂದ್ರಶೇಖರ್, ಮೊಕಾಮಾದಿಂದ ಸುರಭನ್ ರ ಪತ್ನಿ ವೀಣಾ ದೇವಿ ಹಾಗೂ ಝಾಝಾದಿಂದ ಉದಯ್ ನಾರಾಯಣ್ ಚೌಧರಿಯಂತಹ ಪ್ರಮುಖ RJD ನಾಯಕರು ಸ್ಪರ್ಧಿಸುತ್ತಿದ್ದಾರೆ.







