ಟಿವಿ ಚರ್ಚೆ ಸಂದರ್ಭ ‘ಮನುಸ್ಮೃತಿ’ ಹರಿದ ಆರ್ಜೆಡಿ ಸದಸ್ಯೆ; ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

Photo Credit: SHIV KUMAR PUSHPAKAR
ಹೊಸದಿಲ್ಲಿ, ಮಾ. 7: ಟಿ.ವಿ. ವಾಹಿನಿಗಳ ಚರ್ಚೆಯ ನೇರ ಪ್ರಸಾರದ ಸಂದರ್ಭ ಮನಸ್ಮತಿಯ ಪುಟಗಳನ್ನು ಹರಿದ ಆರೋಪದಲ್ಲಿ ರಾಷ್ಟ್ರೀಯ ಜನತಾ ದಳದ ವಕ್ತಾರೆ ಪ್ರಿಯಾಂಕಾ ಭಾರತಿ ವಿರುದ್ಧ ದಾಖಲಿಸಲಾದ ಎಫ್ಐಆರ್ ರದ್ದುಗೊಳಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯ ನಿರಾಕರಿಸಿದೆ.
ಎರಡು ಟಿ.ವಿ. ವಾಹಿನಿಗಳು ಆಯೋಜಿಸಿದ್ದ ಟಿ.ವಿ. ಚರ್ಚೆಯ ನೇರ ಪ್ರಸಾರದ ಸಂದರ್ಭ ನಿರ್ದಿಷ್ಟ ಧರ್ಮದ ಪವಿತ್ರ ಗ್ರಂಥದ ಪುಟಗಳನ್ನು ದೂರುದಾರರು ಹರಿದಿರುವುದು ಉದ್ದೇಶಪೂರ್ವಕ ಎಂಬುದು ಮೇಲ್ನೋಟಕ್ಕೆ ಪ್ರತಿಬಿಂಬಿತವಾಗಿದೆ. ಅವರು ಯಾವುದೇ ನ್ಯಾಯಯುತ ಕಾರಣವಿಲ್ಲದೆ ಮಾಡಿದ ಕೃತ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಕುಮಾರ್ ಬಿರ್ಲಾ ಹಾಗೂ ಅನೀಶ್ ಕುಮಾರ್ ಗುಪ್ತಾ ಅವರನ್ನು ಒಳಗೊಂಡ ಪೀಠ ಹೇಳಿದೆ.
ಸುದ್ದಿ ವಾಹಿನಿಗಳಾದ ಇಂಡಿಯಾ ಟಿವಿ ಹಾಗೂ ಟಿವಿ 9 ಭರತವರ್ಷಿ ಡಿಸೆಂಬರ್ನಲ್ಲಿ ಆಯೋಜಿಸಿದ್ದ ಚರ್ಚೆಯ ನೇರ ಪ್ರಸಾರದ ಸಂದರ್ಭ ಮನುಸ್ಮತಿಯ ಪುಟಗಳನ್ನು ಹರಿದ ಆರೋಪದಲ್ಲಿ ಭಾರತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜವಾಹಾರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪಿಎಚ್ಡಿ ವಿದ್ಯಾರ್ಥಿ ಕೂಡ ಆಗಿರುವ ಭಾರತಿ, ತಾನು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.







