ಅಮಾನತುಗೊಂಡ ಮಾಜಿ ಸಚಿವ ಆರ್.ಕೆ. ಸಿಂಗ್ ಬಿಜೆಪಿಗೆ ರಾಜೀನಾಮೆ

ಆರ್.ಕೆ. ಸಿಂಗ್ | Photo Credit: PTI
ಹೊಸದಿಲ್ಲಿ, ನ. 15: ಪಕ್ಷ ವಿರೋಧಿ ಚಟುವಟಿಕೆಗಳನ್ನು ಆರೋಪಿಸಿ ಕೇಂದ್ರದ ಮಾಜಿ ಇಂಧನ ಸಚಿವ ಹಾಗೂ ಅರಾದ ಮಾಜಿ ಸಂಸದ ಆರ್.ಕೆ. ಸಿಂಗ್ ಅವರನ್ನು ಬಿಜೆಪಿ ಶನಿವಾರ ಅಮಾನತುಗೊಳಿಸಿದೆ.
ಪತ್ರ ಸ್ವೀಕರಿಸಿದ ಬಳಿಕ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಂಗ್ ಅವರಿಗೆ ನೀಡಿದ ಶೋಕಾಸ್ ನೋಟಿಸಿನಲ್ಲಿ ಬಿಜೆಪಿ, ‘‘ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೀರಿ. ಇದು ಶಿಸ್ತು ನಿಯಮಗಳ ಅಡಿಯಲ್ಲಿ ಬರುತ್ತದೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಪಕ್ಷಕ್ಕೆ ಹಾನಿ ಉಂಟು ಮಾಡಿದೆ. ಆದುದರಿಂದ ಆದೇಶದಂತೆ ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಆದುದರಿಂದ ಈ ಪತ್ರ ಸ್ವೀಕರಿಸಿದ ಒಂದು ವಾರದ ಒಳಗೆ ನಿಮ್ಮ ನಿಲುವು ತಿಳಿಸಿ’’ ಎಂದು ಹೇಳಿದೆ.
ಸಿಂಗ್ ಅವರು ಪ್ರಮುಖ ಸರಕಾರಿ ಯೋಜನೆಗಳ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ. ಬಿಹಾರದ ಸೌರ ವಿದ್ಯುತ್ ಯೋಜನೆ 62,000 ಕೋ.ರೂ. ಹಗರಣ. ಬಿಹಾರದಲ್ಲಿ ಅದಾನಿಗೆ ಈ ಯೋಜನೆಯನ್ನು ಹಸ್ತಾಂತರಿಸುವ ಮೂಲಕ ಈ ಹಗರಣ ನಡೆದಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಮುಕ್ತವಾಗಿ ಮಾತನಾಡುವುದಕ್ಕೆ ಜನಪ್ರಿಯರಾಗಿರುವ ಸಿಂಗ್ ಎನ್ಡಿಎ ಕಣಕ್ಕಿಳಿಸಿದ ಅಭ್ಯರ್ಥಿ ಸೇರಿದಂತೆ ಕ್ರಿಮಿನಲ್ ಹಿನ್ನಲೆ ಇರುವ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಮತದಾರರನ್ನು ಆಗ್ರಹಿಸಿದ್ದರು. ಗಂಭೀರ ಆರೋಪಗಳನ್ನು ಎದುರಿಸುತ್ತಿರುವವರಲ್ಲಿ ಉಪ ಮುಖ್ಯಮಂತ್ರಿ ಸ್ರಾಟ್ ಚೌಧರಿ ಹಾಗೂ ಜೆಡಿ(ಯು) ಅಭ್ಯರ್ಥಿ ಅನಂತ್ ಸಿಂಗ್ ಅವರನ್ನು ಕೂಡ ಸೇರಿಸಿದ್ದರು. ಅವರು ನಿಮ್ಮ ಜಾತಿಯಾಗಿದ್ದರು ಕೂಡ ಅವರನ್ನು ಬೆಂಬಲಿಸಬೇಡಿ ಎಂದು ಸಿಂಗ್ ಹೇಳಿದ್ದರು. ಸ್ಪರ್ಧಿಸಿದ ಎಲ್ಲರೂ ಕಳಂಕಿತರು ಎಂದು ಕಂಡು ಬಂದರೆ, ನೋಟಾಕ್ಕೆ ಮತ ಚಲಾಯಿಸಿ ಎಂದು ಸಿಂಗ್ ತಿಳಿಸಿದ್ದರು.
ಅಲ್ಲದೆ, ಸಿಂಗ್ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.
ಸಿಂಗ್ ಅವರ ಜೊತೆಗೆ ಪಕ್ಷದ ಎಂಎಲ್ಸಿ ಅಶೋಕ್ ಕುಮಾರ್ ಅಗರ್ವಾಲ್ ಹಾಗೂ ಕಟಿಹಾರ್ ಮೇಯರ್ ಉಷಾ ಅಗರ್ವಾಲ್ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಬಿಜೆಪಿ ಅಮಾನತುಗೊಳಿಸಿದೆ.







