ದಿಲ್ಲಿ-ಮುಂಬೈ ಹೆದ್ದಾರಿಯಲ್ಲಿ ಪಿಕಪ್ ವಾಹನ ಢಿಕ್ಕಿ : ಆರು ಮಂದಿ ಸ್ವಚ್ಛತಾ ಕಾರ್ಮಿಕರು ಮೃತ್ಯು

Photo |NDTV
ಹೊಸದಿಲ್ಲಿ: ಹರ್ಯಾಣದ ನುಹ್ನ ಫಿರೋಝ್ಪುರ ಜಿರ್ಕಾದ ಇಬ್ರಾಹಿಂ ಬಾಸ್ ಗ್ರಾಮದಲ್ಲಿ ದಿಲ್ಲಿ-ಮುಂಬೈ ಹೆದ್ದಾರಿಯಲ್ಲಿ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮಹಿಳಾ ಸ್ವಚ್ಛತಾ ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಿಳಾ ಕಾರ್ಮಿಕರು ಹೆದ್ದಾರಿಯಲ್ಲಿ ಸ್ವಚ್ಛತೆ ಮಾಡುತ್ತಿದ್ದಾಗ ದಿಲ್ಲಿಯಿಂದ ಅಲ್ವಾರ್ ಕಡೆಗೆ ಅತಿವೇಗದಲ್ಲಿ ತೆರಳುತ್ತಿದ್ದ ಪಿಕಪ್ ವಾಹನ ಕಾರ್ಮಿಕರಿಗೆ ಢಿಕ್ಕಿ ಹೊಡೆದಿದೆ. ಗಾಯಗೊಂಡ ಕಾರ್ಮಿಕರನ್ನು ಮಂಡಿ ಖೇರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಮೃತ ಐವರು ಕಾರ್ಮಿಕರು ಖೇರಿ ಕಲಾನ್ ಗ್ರಾಮಕ್ಕೆ ಸೇರಿದವರಾಗಿದ್ದು, ಓರ್ವರು ಜಿಮ್ರಾವತ್ ಗ್ರಾಮದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ʼಅಪಘಾತದ ಸ್ಥಳದಲ್ಲಿ ಪಿಕಪ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಕಾರಣವಾದ ಘಟನೆ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚಿನ ಪುರಾವೆಯನ್ನು ಸಂಗ್ರಹಿಸಲಾಗುತ್ತಿದೆʼ ಎಂದು ಸ್ಟೇಷನ್ ಹೌಸ್ ಆಫೀಸರ್ ಅಮನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಘಟನೆಯು ಹೆದ್ದಾರಿಗಳಲ್ಲಿ ಕೆಲಸ ಮಾಡುವ ಸ್ವಚ್ಛತಾ ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.







