ಕೊಳಕು ಕಿಡ್ನಿ ಎಂದು ನಿಂದಿಸಿದರು, ಹೊಡೆಯಲು ಚಪ್ಪಲಿಯೆತ್ತಿದ್ದರು: ಸಂಬಂಧ ಕಡಿದುಕೊಂಡ ರೋಹಿಣಿ ಆಚಾರ್ಯ ಹೊಸ ಆರೋಪ

ಲಾಲು ಪ್ರಸಾದ್ ಯಾದವ್ , ರೋಹಿಣಿ ಆಚಾರ್ಯ | Photo Credit : PTI
ಪಾಟ್ನಾ,ನ.16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯ ಬಳಿಕ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿಯ ಬಿರುಕು ಇನ್ನಷ್ಟು ದೊಡ್ಡದಾಗುತ್ತಿರುವಂತಿದೆ. ಲಾಲು ಪುತ್ರಿ ರೋಹಿಣಿ ಆಚಾರ್ಯ (46) ತನ್ನ ಕುಟುಂಬದ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. 2022ರಲ್ಲಿ ತನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿದ್ದ ರೋಹಿಣಿ,’ಕೊಳಕು ಮೂತ್ರಪಿಂಡ’ದ ಬದಲಾಗಿ ಚುನಾವಣಾ ಟಿಕೆಟ್ ಖರೀದಿಸಿದ್ದೆ ಎಂದು ಕುಟುಂಬವು ತನ್ನನ್ನು ನಿಂದಿಸಿದೆ ಎಂದು ಆರೋಪಿಸಿದ್ದಾರೆ.
ತಾನು ಕುಟುಂಬದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಮತ್ತು ರಾಜಕೀಯವನ್ನು ತೊರೆಯುತ್ತಿದ್ದೇನೆ ಎಂದು ರೋಹಿಣಿ ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಘೋಷಿಸಿದ್ದರು. ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದಿಂದ ಮತ್ತು ಕುಟುಂಬದಿಂದ ಉಚ್ಚಾಟಿಸಿದ ಬಳಿಕ ಇದು ಯಾದವ್ ಕುಟುಂಬಕ್ಕೆ ಎದುರಾಗಿರುವ ಎರಡನೇ ಬಿಕ್ಕಟ್ಟು ಆಗಿದೆ.
ರವಿವಾರ ಬೆಳಿಗ್ಗೆ ಎರಡು ಭಾವನಾತ್ಮಕ ಪೋಸ್ಟ್ಗಳಲ್ಲಿ ರೋಹಿಣಿ ತಾನು ಕುಟುಂಬದಲ್ಲಿ ಏನನ್ನೆಲ್ಲ ಅನುಭವಿಸಿದ್ದೇನೆ ಎನ್ನುವುದನ್ನು ವಿವರಿಸಿದ್ದಾರೆ.
‘ನಿನ್ನೆ ನನ್ನನ್ನು ನಿಂದಿಸಲಾಯಿತು. ನಾನು ಕೊಳಕು,ನಾನು ನನ್ನ ತಂದೆ ನನ್ನ ಕೊಳಕು ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳುವಂತೆ ಮಾಡಿದ್ದೆ. ನಾನು ನನ್ನ ಕೊಳಕು ಮೂತ್ರಪಿಂಡವನ್ನು ತಂದೆಯ ಶರೀರದಲ್ಲಿ ಹಾಕಿಸಿ ಕೋಟ್ಯಂತರ ರೂಪಾಯಿಗಳನ್ನು ಪಡೆದಿದ್ದೆ,ಚುನಾವಣೆಗೆ ಟಿಕೆಟ್ ಖರೀದಿಸಿದ್ದೆ ಎಂದು ಜರಿಯಲಾಯಿತು’ ಎಂದು ಶನಿವಾರ ರಾತ್ರಿಯೇ ತನ್ನ ಗಂಡ ಮತ್ತು ಮಕ್ಕಳಿರುವ ಸಿಂಗಾಪುರಕ್ಕೆ ತೆರಳಿರುವ ಮಾಜಿ ರಾಜಕಾರಣಿ ರೋಹಿಣಿ ಹೇಳಿದ್ದಾರೆ. ಆರ್ಜೆಡಿ 2024ರ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಸರನ್ ಕ್ಷೇತ್ರದಲ್ಲಿ ಕಣಕ್ಕಿಳಿಸಿತ್ತು,ಆದರೆ ಗೆಲ್ಲಲು ವಿಫಲರಾಗಿದ್ದರು.
ತನ್ನ ಪತಿ ಮತ್ತು ಮಕ್ಕಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲು ತನ್ನ ಮೂತ್ರಪಿಂಡವನ್ನು ನೀಡಿ ತನ್ನ ತಂದೆಯನ್ನು ಉಳಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡು ‘ಪಾಪ’ವೆಸಗಿದ್ದೇನೆ ಎಂದೂ ರೋಹಿಣಿ ಹೇಳಿದ್ದಾರೆ.
‘ನನ್ನ ಕುಟುಂಬ,ನನ್ನ ಮೂವರು ಮಕ್ಕಳನ್ನು ನೋಡಿಕೊಳ್ಳದಿದ್ದುದು, ನನ್ನ ಮೂತ್ರಪಿಂಡವನ್ನು ದಾನ ಮಾಡುವಾಗ ನನ್ನ ಪತಿ ಅಥವಾ ನನ್ನ ಅತ್ತೆ-ಮಾವನ ಅನುಮತಿ ಪಡೆದುಕೊಳ್ಳದಿದ್ದುದು ನಾನು ಮಾಡಿದ ದೊಡ್ಡ ಪಾಪವಾಗಿದೆ. ನನ್ನ ದೇವರು, ನನ್ನ ತಂದೆಯನ್ನು ಉಳಿಸಿಕೊಳ್ಳಲು ನಾನು ಹಾಗೆ ಮಾಡಿದ್ದೆ ಮತ್ತು ಇಂದು ಅದನ್ನು ಕೊಳಕು ಎಂದು ಕರೆಯಲಾಗುತ್ತಿದೆ. ನಿಮ್ಮಲ್ಲಿ ಯಾರೂ ನನ್ನಂತೆ ತಪ್ಪು ಮಾಡದಿರಲಿ, ಯಾವುದೇ ಕುಟುಂಬಕ್ಕೆ ರೋಹಿಣಿಯಂತಹ ಮಗಳು ಎಂದಿಗೂ ಸಿಗದಿರಲಿ ’ಎಂದೂ ಅವರು ಬರೆದಿದ್ದಾರೆ.
‘ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ. ಸೋದರ ತೇಜಸ್ವಿ ಯಾದವ್ ರ ಆಪ್ತ ಹಾಗೂ ಹಿರಿಯ ಆರ್ಜೆಡಿ ನಾಯಕ ಸಂಜಯ್ ಯಾದವ್ ಮತ್ತು ರಮೀಝ್ ಖಾನ್ ನನಗೆ ಹೀಗೆ ಮಾಡುವಂತೆ ಸೂಚಿಸಿದ್ದಾರೆ ’ ಎಂದು ರೋಹಿಣಿ ಶನಿವಾರ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದರು.
‘ನನ್ನ ವಿರುದ್ಧ ಕೊಳಕು ನಿಂದನೆಗಳನ್ನು ಮಾಡಲಾಗಿದೆ ಮತ್ತು ನನ್ನ ಮೇಲೆ ಚಪ್ಪಲಿಯನ್ನು ಎತ್ತಲಾಗಿತ್ತು’ ಎಂದು ಇನ್ನೊಂದು ಪೋಸ್ಟ್ನಲ್ಲಿ ಆರೋಪಿಸಿರುವ ರೋಹಿಣಿ,‘ನಾನು ನನ್ನ ಆತ್ಮಗೌರವದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ,ಸತ್ಯವನ್ನು ಬಿಟ್ಟು ಕೊಡಲಿಲ್ಲ ಮತ್ತು ಇದರಿಂದಾಗಿಯೇ ನಾನು ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು’ ಎಂದು ಬರೆದಿದ್ದಾರೆ.







