ಲಾಲು ಕುಟುಂಬದಲ್ಲಿ ತೀವ್ರ ಬಿಕ್ಕಟ್ಟು | ತೇಜಸ್ವಿ–ಸಂಜಯ್–ರಮೀಝ್ ರಿಂದ ಅವಮಾನ, ನಿಂದನೆ, ಹಿಂಸೆ : ರೋಹಿಣಿ ಆಚಾರ್ಯ ಗಂಭೀರ ಆರೋಪ

Photo | NDTV
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಭಾರೀ ಸೋಲಿನ ಪರಿಣಾಮವಾಗಿ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿದೆ. ರಾಜಕೀಯ ತೊರೆಯುವುದಾಗಿ ಹಾಗೂ ಕುಟುಂಬವನ್ನು ತ್ಯಜಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲೇ, ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಮ್ಮ ಸಹೋದರ ತೇಜಸ್ವಿ ಯಾದವ್ ಮತ್ತು ಅವರ ಆಪ್ತರಾದ ಸಂಜಯ್ ಯಾದವ್ ಮತ್ತು ರಮೀಝ್ ತಮ್ಮನ್ನು “ಮನೆಯಿಂದ ಹೊರಹಾಕಿದರು, ಅವಮಾನಿಸಿದರು, ನಿಂದಿಸಿದರು ಮತ್ತು ಹಲ್ಲೆ ಮಾಡಿದರು” ಎಂದು ಗಂಭೀರ ಆರೋಪ ನೀಡಿದ್ದಾರೆ.
ಪಕ್ಷದ ಸೋಲಿನ ಕಾರಣಗಳ ಬಗ್ಗೆ ಪ್ರಶ್ನಿಸಿದಕ್ಕೆ ಈ ಹಿಂಸೆ ಮತ್ತು ಅವಹೇಳನಕ್ಕೆ ಗುರಿಯಾದೆ ಎಂದು ANI ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಅವರು ಹೇಳಿದ್ದಾರೆ.
“ನನಗೆ ಇಂದು ಕುಟುಂಬವೇ ಇಲ್ಲ. ಸಂಜಯ್ ಯಾದವ್, ರಮೀಝ್ ಮತ್ತು ತೇಜಸ್ವಿ ಯಾದವ್ ನನ್ನನ್ನು ಕುಟುಂಬದಿಂದ ಹೊರಹಾಕಿದವರು. ಪಕ್ಷಕ್ಕೆ ಏಕೆ ಸೋಲಾಯಿತು ಎಂದು ಕೇಳಿದರೆ ನಿಂದನೆ ಮತ್ತು ಹಿಂಸೆಯೇ ಉತ್ತರ” ಎಂದು ರೋಹಿಣಿ ಆರೋಪಿದ್ದಾರೆ.
ಶನಿವಾರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನಾನು ರಾಜಕೀಯ ತೊರೆಯುತ್ತಿದ್ದೇನೆ. ಕುಟುಂಬವನ್ನೂ ತೊರೆಯುತ್ತಿದ್ದೇನೆ. ಸಂಜಯ್ ಮತ್ತು ರಮೀಝ್ ಕೇಳಿದ್ದೇ ಇದನ್ನು. ಚುನಾವಣಾ ಸೋಲಿನ ಎಲ್ಲಾ ಹೊಣೆಗಾರಿಕೆಯನ್ನು ನಾನು ಹೊರುತ್ತೇನೆ” ಎಂದು ರೋಹಿಣಿ ಪೋಸ್ಟ್ ಮಾಡಿದ್ದರು.
ತೇಜಸ್ವಿ ಯಾದವ್ ಅವರ ಆಪ್ತನಾಗಿರುವ ಸಂಜಯ್ ಯಾದವ್ 2012ರಲ್ಲಿ ಆರ್ಜೆಡಿಗೆ ಸೇರಿ, 2024ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಮೀಝ್ ತೇಜಸ್ವಿಯ ಹಳೆಯ ಸ್ನೇಹಿತನಾಗಿದ್ದು, ಉತ್ತರ ಪ್ರದೇಶದ ರಾಜಕೀಯ ಕುಟುಂಬದ ಮೂಲದವರು ಎನ್ನಲಾಗಿದೆ.
243 ಸ್ಥಾನಗಳಿರುವ ಬಿಹಾರ ವಿಧಾನಸಭೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಆರ್ಜೆಡಿ ಕೇವಲ 25 ಸ್ಥಾನಗಳನ್ನು ಮಾತ್ರ ಗೆದ್ದು ಕಳಪೆ ಪ್ರದರ್ಶನ ನೀಡಿದೆ. ಮಹಾಘಟಬಂಧನ್ ಒಟ್ಟಾರೆ 40ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿದರೆ, ಎನ್ಡಿಎ ಸ್ಪಷ್ಟ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ 89 ಸ್ಥಾನಗಳನ್ನು, ಜೆಡಿಯು 85 ಸ್ಥಾನಗಳನ್ನು ಮತ್ತು ಎಲ್ಜೆಪಿ (ಆರ್ವಿ) 19 ಸ್ಥಾನಗಳನ್ನು ಗೆದ್ದಿದೆ.
ರೋಹಿಣಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್, “ಲಾಲು ಯಾದವ್ ಅವರನ್ನು ಉಳಿಸಲು ರೋಹಿಣಿ ಕಿಡ್ನಿ ದಾನ ಮಾಡಿದವರು. ಕುಟುಂಬವು ಒಬ್ಬರ ವರ್ತನೆಯಿಂದ ಒಡೆಯಬಾರದು. ಲಾಲು ಮತ್ತು ರಾಬ್ರಿ ದೇವಿ ಕುಟುಂಬವನ್ನು ಉಳಿಸಬೇಕು,” ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ, “ಇದು ಅವರ ಕುಟುಂಬದ ವಿಷಯ. ಆರ್ಜೆಡಿ ಒಳಭಾಗದಲ್ಲಿ ಬಿರುಕುಗಳು ಗಂಭೀರವಾಗುತ್ತಿರುವುದು ಸ್ಪಷ್ಟ,” ಎಂದರು.







