ರೋಹಿತ್ ಶರ್ಮ ಕುರಿತ ಪೋಸ್ಟ್ ವಿವಾದ: ಪಕ್ಷದ ಸೂಚನೆಯಂತೆ ಪೋಸ್ಟ್ ಅಳಿಸಿದ ಕಾಂಗ್ರೆಸ್ ವಕ್ತಾರೆ

Photo : NDTV
ಹೊಸದಿಲ್ಲಿ: “ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ದಢೂತಿ ಕ್ರೀಡಾಪಟು” ಎಂಬ ಕಾಂಗ್ರೆಸ್ ವಕ್ತಾರೆ ಶರ್ಮ ಮುಹಮ್ಮದ್ ರ ಪೋಸ್ಟ್ ತೀವ್ರ ವಿವಾದಕ್ಕೀಡಾಗಿದ್ದು, ಇದರ ಬೆನ್ನಿಗೇ, ಪೋಸ್ಟ್ ಅನ್ನು ಅಳಿಸಿ ಹಾಕುವಂತೆ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸೂಚಿಸಿದೆ. ಪಕ್ಷದ ಆದೇಶವನ್ನು ತಕ್ಷಣವೇ ಪಾಲಿಸಿರುವ ಶರ್ಮ ಮುಹಮ್ಮದ್, ರೋಹಿತ್ ಶರ್ಮ ಕುರಿತು ಪೋಸ್ಟ್ ಹಾಗೂ ನಂತರದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಪೋಸ್ಟ್ ಗಳನ್ನೆಲ್ಲ ಅಳಿಸಿ ಹಾಕಿದ್ದಾರೆ.
ರವಿವಾರ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ರೋಹಿತ್ ಶರ್ಮರನ್ನು ಟೀಕಿಸಿ ಶರ್ಮ ಮುಹಮ್ಮದ್ ಮೇಲಿನಂತೆ ಪೋಸ್ಟ್ ಮಾಡಿದ್ದರು. “ರೋಹಿತ್ ಶರ್ಮ ದಢೂತಿ ಕ್ರೀಡಾಪಟು! ತೂಕ ಕಳೆದುಕೊಳ್ಳಬೇಕಾದ ಅಗತ್ಯವಿದೆ! ಹಾಗೂ ಖಂಡಿತ ಭಾರತ ಇಲ್ಲಿಯವರೆಗೆ ಕಂಡಿರುವ ಅತ್ಯಂತ ಕಳಪೆ ನಾಯಕ ಅವರಾಗಿದ್ದಾರೆ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಟೀಕಿಸಿದ್ದರು. ಅವರ ಈ ಪೋಸ್ಟ್ ಗೆ ರೋಹಿತ್ ಶರ್ಮ ಅಭಿಮಾನಿಗಳು ಹಾಗೂ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ತಂಡದ ಸಾಧನೆಯ ಅಂಕಿ-ಅಂಶಗಳತ್ತ ಅವರ ಅಭಿಮಾನಿಗಳು ಬೊಟ್ಟು ಮಾಡಿದರೆ, ‘ಇದು ಕಾಂಗ್ರೆಸ್ ಪಕ್ಷದ ತುರ್ತು ಪರಿಸ್ಥಿತಿ ಮನಸ್ಥಿತಿ” ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು. ಇದು ವಿವಾದದ ಸ್ವರೂಪಕ್ಕೆ ತಿರುಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್, ರೋಹಿತ್ ಶರ್ಮ ಕುರಿತ ಪೋಸ್ಟ್ ಅನ್ನು ಅಳಿಸಿ ಹಾಕುವಂತೆ ಶರ್ಮ ಮುಹಮ್ಮದ್ ಗೆ ಸೂಚನೆ ನೀಡಿದೆಯಲ್ಲದೆ, ಅವರ ಪೋಸ್ಟ್ ನಿಂದ ಅಂತರವನ್ನೂ ಕಾಯ್ದುಕೊಂಡಿದೆ.
ಪಕ್ಷದ ಸೂಚನೆಯನ್ವಯ ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿರುವ ಶರ್ಮ ಮುಹಮ್ಮದ್, ನನ್ನ ಹೇಳಿಕೆ ಸಾಮಾನ್ಯ ಸ್ವರೂಪದ್ದಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಮುಂದುವರಿದು, “ಪ್ರಜಾತಂತ್ರದಲ್ಲಿರುವ ನಮಗೆ ಹೇಗೆ ಮಾತನಾಡುವ ಹಕ್ಕಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.







