ಆಲ್ ರೌಂಡರ್ ಶಿವಂ ದುಬೆ ಜೊತೆಗೆ ಬ್ಯಾಟಿಂಗ್ ಅಭ್ಯಾಸ ನಡೆಸಿದ ರೋಹಿತ್ ಶರ್ಮಾ

ಶಿವಂ ದುಬೆ , ರೋಹಿತ್ ಶರ್ಮಾ | PC : X \ Sportzpics
ನ್ಯೂಯಾರ್ಕ್ : ಇತ್ತೀಚೆಗೆ ಕೊನೆಗೊಂಡಿರುವ ಐಪಿಎಲ್ ಟೂರ್ನಿಯಲ್ಲಿ ಆಲ್ರೌಂಡರ್ ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ ಆರು ಎಸೆತಗಳನ್ನು ಎಸೆದಿದ್ದರೂ ಭಾರತದ ನಾಯಕ ರೋಹಿತ್ ಶರ್ಮಾ ಅವರು ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ದುಬೆ ಅವರ ವೇಗದ ಬೌಲಿಂಗ್ ಕೌಶಲ್ಯವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಬಾಂಗ್ಲಾದೇಶ ವಿರುದ್ದ ನ್ಯೂಯಾರ್ಕ್ನಲ್ಲಿ ಜೂನ್ 1ರಂದು ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿರುವ ಟೀಮ್ ಇಂಡಿಯಾ ಅದಕ್ಕೂ ಮೊದಲು ಗುರುವಾರ ತನ್ನ ಮೊದಲ ಅಭ್ಯಾಸ ನಡೆಸಿತು.
ಭಾರತದ ಪ್ರಾಕ್ಟೀಸ್ ವೇಳೆ ದುಬೆ ಅವರು ಬೌಲಿಂಗ್ ಕುರಿತಂತೆ ರೋಹಿತ್ ರಿಂದ ಮಾರ್ಗದರ್ಶನ ಪಡೆಯುತ್ತಿರುವುದು ಕಂಡುಬಂತು. ಬಲಗೈ ಮಧ್ಯಮ ವೇಗದ ಬೌಲರ್ ದುಬೆ ಅವರು ನೆಟ್ನಲ್ಲಿ ರೋಹಿತ್ ಗೆ ಬೌಲಿಂಗ್ ಮಾಡಿದರು.
ದುಬೆ ಈ ವರ್ಷದ ಐಪಿಎಲ್ ನಲ್ಲಿ ಸಿಎಸ್ಕೆ ಪರ 14 ಪಂದ್ಯಗಳನ್ನು ಆಡಿದ್ದರೂ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದರು. ದುಬೆ 14 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.
ಸಿಎಸ್ಕೆ ತಂಡ ದುಬೆ ಅವರ ಬ್ಯಾಟಿಂಗ್ ಕೌಶಲ್ಯವನ್ನು ಹೆಚ್ಚಾಗಿ ಬಳಸಿಕೊಂಡಿತ್ತು. ಎಡಗೈ ಬ್ಯಾಟರ್ ಆಗಿರುವ ದುಬೆ ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳ ವಿರುದ್ಧ ಚೆನ್ನಾಗಿ ಆಡುವಲ್ಲಿ ಸಫಲರಾಗಿದ್ದರು. ಭಾರತವು 11 ವರ್ಷಗಳ ನಂತರ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವತ್ತ ಚಿತ್ತಹರಿಸಿದ್ದು ನಾಯಕ ರೋಹಿತ್ ಅವರು ದುಬೆ ಅವರನ್ನು ಕೇವಲ ಬ್ಯಾಟರ್ ಆಗಿ ಬಳಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ದುಬೆ ಈ ವರ್ಷದ ಐಪಿಎಲ್ ನಲ್ಲಿ 14 ಇನಿಂಗ್ಸ್ಗಳಲ್ಲಿ ಒಟ್ಟು 396 ರನ್ ಗಳಿಸಿದ್ದರು. ಒಟ್ಟು 3 ಅರ್ಧಶತಕಗಳನ್ನು ಬಾರಿಸಿದ್ದು ಔಟಾಗದೆ 66 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.







