ಕೋಲ್ಕತ್ತಕ್ಕೆ ಆಗಮಿಸಿದ ಫುಟ್ಬಾಲ್ ಮಾಂತ್ರಿಕ ರೊನಾಲ್ಡಿನೊ

Photo : PTI
ಕೋಲ್ಕತ : ದುರ್ಗಾ ಪೂಜೆ ಸಂಭ್ರಮದ ನಡುವೆ, ಬ್ರೆಝಿಲ್ ಫುಟ್ಬಾಲ್ ದಂತಕತೆ ರೊನಾಲ್ಡಿನೊ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಕ್ಕೆ ಆಗಮಿಸಿದ್ದಾರೆ. ಮೂರು ಬಾರಿಯ ಚಿನ್ನದ ಚೆಂಡು ವಿಜೇತ ರೊನಾಲ್ಡಿನೊ ಫುಟ್ಬಾಲ್ ಹುಚ್ಚಿನ ನಗರಕ್ಕೆ ಬರುತ್ತಿರುವುದು ಇದು ಮೊದಲ ಬಾರಿಯಾಗಿದೆ.
ಕೋಲ್ಕತಕ್ಕೆ ಈವರೆಗೆ ಫುಟ್ಬಾಲ್ ಜಗತ್ತಿನ ಹಲವು ಮಾಂತ್ರಿಕರು ಭೇಟಿ ನೀಡಿದ್ದಾರೆ. ಪೆಲೆ, ಡೀಗೊ ಮರಡೋನ ಮತ್ತು ಲಿಯೊನೆಲ್ ಮೆಸ್ಸಿ ಅವರ ಪೈಕಿ ಕೆಲವರು.
2002ರ ವಿಶ್ವಕಪ್ ವಿಜೇತನನ್ನು ನಗರದ ಪೂಜಾ ಪೆಂಡಾಲ್ನಲ್ಲಿ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರೊನಾಲ್ಡಿನೊ ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ದುರ್ಗಾ ಪೂಜಾ ಪೆಂಡಾಲನ್ನು ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಅವರು ಇತರರ ಜೊತೆಗೆ ನೃತ್ಯ ಮಾಡುತ್ತಿರುವುದು ಕಂಡುಬಂತು.
ಅವರು ಕೋಲ್ಕತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ ಶಾಸಕ ಸುಜಿತ್ ಬೋಸ್ ಜೊತೆ ಫುಟ್ಬಾಲ್ ಕೂಡ ಆಡಿದರು.
ತಾನು ಕೋಲ್ಕತಕ್ಕೆ ಭೇಟಿ ನೀಡುವುದಾಗಿ ರೊನಾಲ್ಡಿನೊ ಅಕ್ಟೋಬರ್ ಆರಂಭದಲ್ಲಿ ಘೋಷಿಸಿದ್ದರು. ‘‘ಎಲ್ಲರೂ ಕೇಳಿ… ಅಕ್ಟೊಬರ್ ಮಧ್ಯ ಭಾಗದಲ್ಲಿ ನಾನು ಕೋಲ್ಕತಕ್ಕೆ ಚೊಚ್ಚಲ ಭೇಟಿ ನೀಡುತ್ತಿದ್ದೇನೆ’’ ಎಂದು 43 ವರ್ಷದ ಫುಟ್ಬಾಲಿಗ ಫೇಸ್ ಬುಕ್ ನಲ್ಲಿ ಬರೆದಿದ್ದರು.





