ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವ ನಿರ್ಲಜ್ಜ ಪ್ರಯತ್ನ: ಸಮನ್ಸ್ ಪ್ರಶ್ನಿಸಿ ಕಪಿಲ್ ಮಿಶ್ರಾ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ದಿಲ್ಲಿ ನ್ಯಾಯಾಲಯ

ಕಪಿಲ್ ಮಿಶ್ರಾ | PC : PTI
ಹೊಸದಿಲ್ಲಿ : 2020ರ ದಿಲ್ಲಿ ವಿಧಾನಸಭಾ ಚುನಾವಣೆ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯದ ಸಮನ್ಸ್ ಆದೇಶ ಪ್ರಶ್ನಿಸಿ ದಿಲ್ಲಿ ಕಾನೂನು ಸಚಿವ ಕಪಿಲ್ ಮಿಶ್ರಾ ಸಲ್ಲಿಸಿದ್ದ ಮನವಿಯನ್ನು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ವಜಾಗೊಳಿಸಿದೆ. ಕಪಿಲ್ ಮಿಶ್ರಾ ಚುನಾವಣಾ ಪ್ರಚಾರದ ವೇಳೆ ದ್ವೇಷವನ್ನು ಹರಡಲು ʼಪಾಕಿಸ್ತಾನʼ ಪದ ಬಳಸಿರುವುದು ಕಂಡು ಬಂದಿದೆ ಎಂದು ಹೇಳಿದೆ.
ಈ ಹೇಳಿಕೆಗಳು ದುರದೃಷ್ಟವಾದುದು, ಇದು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವ ನಿರ್ಲಜ್ಜ ಪ್ರಯತ್ನವಾಗಿದೆ. ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸಲು ಮತ್ತು ಮತ ಗಳಿಸಲು ದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ದಿಲ್ಲಿ ನ್ಯಾಯಾಲಯ ಇದೇ ವೇಳೆ ಗಮನಿಸಿದೆ.
ದಿಲ್ಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆಗೆ ಹೋಲಿಸಿ ವಿವಾದಾತ್ಮಕ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ ವಿರುದ್ಧ ದಿಲ್ಲಿ ಪೊಲೀಸರು ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಾಜಪೂತ್ ಅವರ ಪೀಠ ಈ ಕುರಿತು 2024ರ ಜೂನ್ನಲ್ಲಿ ಮಿಶ್ರಾಗೆ ಸಮನ್ಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಕಪಿಲ್ ಮಿಶ್ರಾ ರೋಸ್ ಅವೆನ್ಯೂ ನ್ಯಾಯಾಲಯದ ಮೊರೆ ಹೋಗಿದ್ದರು.







