"ಬಿಜೆಪಿ ಸೋತ ಪಂಚಾಯತ್ಗಳಿಗೆ ಸರಕಾರಿ ಯೋಜನೆ ಸಿಗುವುದಿಲ್ಲ”: ಚುನಾವಣಾ ರ್ಯಾಲಿಯಲ್ಲಿ ಹೇಳಿಕೆ ನೀಡಿದ ಅರುಣಾಚಲ ಪ್ರದೇಶ ಸಚಿವ

Photo credit: X/@OjingBJP
ಇಟಾನಗರ: ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸೋತರೆ ಅಂತಹ ಗ್ರಾಮ ಪಂಚಾಯಿತಿಗೆ ಸರಕಾರಿ ಯೋಜನೆಗಳನ್ನು ತಡೆಯುತ್ತೇವೆ ಎಂದು ಅರುಣಾಚಲ ಪ್ರದೇಶದ ಸಚಿವರೊಬ್ಬರು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
The New Indian Express ವರದಿಯ ಪ್ರಕಾರ, ಲೋವರ್ ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಬುಧವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅರುಣಾಚಲ ಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಓಜಿಂಗ್ ಟೇಸಿಂಗ್, ಬಿಜೆಪಿ ಸೋತ ಪಂಚಾಯತ್ಗೆ ಸರಕಾರಿ ಯೋಜನೆಗಳು ಸಿಗುವುದಿಲ್ಲ ಎಂದು ಹೇಳಿದ್ದಾರೆ. “ನೆನಪಿರಲಿ, ನಾನು ಹೇಳಿದ್ದನ್ನೇ ಮಾಡುತ್ತೇನೆ” ಎಂದು ಸಚಿವರು ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರುಣಾಚಲ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್ 15ರಂದು ನಡೆಯಲಿದೆ.
ಸಚಿವರ ಹೇಳಿಕೆ ಅಸಂಬದ್ಧ ಮತ್ತು ಕಾನೂನುಬಾಹಿರ ಎಂದು ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿದೆ. ಸಚಿವ ಓಜಿಂಗ್ ಟೇಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಈ ಹೇಳಿಕೆಯು ಮತದಾರರಿಗೆ ನೇರ ಬೆದರಿಕೆಯಾಗಿದೆ. ಅಧಿಕಾರದ ದುರುಪಯೋಗ ಮತ್ತು ಬೆದರಿಕೆಯ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಬಲವಂತದ ಪ್ರಯತ್ನವಾಗಿದೆ. ಸಚಿವರ ಹೇಳಿಕೆಯು ಮಾದರಿ ನೀತಿ ಸಂಹಿತೆ, 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 ಅನ್ನು ಉಲ್ಲಂಘಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.







