ಕೇರಳ | ಆರೆಸ್ಸೆಸ್ ನಿಯಂತ್ರಣದಲ್ಲಿದ್ದ ಶಾಲೆಯಲ್ಲಿ ಕಚ್ಛಾ ಬಾಂಬ್ ಸ್ಫೋಟ

ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ಕಚ್ಛಾ ಬಾಂಬ್ ಸ್ಫೋಟಗೊಂಡಿರುವುದು ಆತಂಕದ ಜೊತೆಗೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.
ಪಾಲಕ್ಕಾಡ್ನ ವಡಕಾಂತರದಲ್ಲಿರುವ ಆರೆಸ್ಸೆಸ್ ನಿರ್ವಹಿಸುತ್ತಿರುವ ವ್ಯಾಸ ವಿದ್ಯಾ ಪೀಠಂ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದೆ. ವಿದ್ಯಾರ್ಥಿಯೋರ್ವ ಶಾಲಾ ಆವರಣದಲ್ಲಿ ಕಂಡುಬಂದ ವಸ್ತುವನ್ನು ಸ್ಫೋಟಕ ಎಂದು ತಿಳಿಯದೆ ಎಸೆದ ವೇಳೆ ಸ್ಪೋಟ ಸಂಭವಿಸಿದೆ.
ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಮತ್ತು ವೃದ್ಧ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ನಂತರ ಪೊಲೀಸರು ಶೋಧ ಕಾರ್ಯಚರಣೆ ನಡೆಸಿದ ವೇಳೆ ಶಾಲಾ ಆವರಣದಲ್ಲಿ ಇದೇ ರೀತಿಯ ನಾಲ್ಕು ಸ್ಫೋಟಕಗಳು ಪತ್ತೆಯಾಗಿವೆ. ಕಾಡುಹಂದಿಗಳನ್ನು ಹಿಡಿಯಲು ಈ ಬಾಂಬ್ ಅನ್ನು ಇರಿಸಲಾಗಿತ್ತು ಎಂದು ಹೇಳಲಾಗಿದೆ.
ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಹಿಂಸಾಚಾರವನ್ನು ಸೃಷ್ಟಿಸಲು ಶಾಲೆಯಲ್ಲಿ ಬಾಂಬ್ ಇರಿಸಲಾಗಿತ್ತು. ಶಾಲೆಯನ್ನು ಆರೆಸ್ಸೆಸ್ ತರಬೇತಿ ಕೇಂದ್ರಗಳಾಗಿ ಬಳಸುತ್ತಿದೆ. ಆರೆಸ್ಸೆಸ್ನ ಎಲ್ಲಾ ಶಾಖೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕು ಎಂದು ಸಿಪಿಎಂ, ಕಾಂಗ್ರೆಸ್ ಮತ್ತು ಡಿವೈಎಫ್ ಒತ್ತಾಯಿಸಿವೆ.
ಸ್ಫೋಟದ ಹಿಂದೆ ಪಿತೂರಿಯಿದೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಆರೋಪಿಸಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







