Maharashtra | 74 ಲಕ್ಷಕ್ಕೆ ಹಿಗ್ಗಿದ ಒಂದು ಲಕ್ಷ ರೂ. ಸಾಲ: ತನ್ನ ಕಿಡ್ನಿಯನ್ನೇ ಮಾರಿದ ರೈತ!

Photo : ndtv
ಚಂದ್ರಾಪುರ್ (ಮಹಾರಾಷ್ಟ್ರ): ದಿನಕ್ಕೆ 10,000 ರೂ. ಬಡ್ಡಿ ದರದಲ್ಲಿ ಒಂದು ಲಕ್ಷ ರೂ. ಸಾಲ 74 ಲಕ್ಷ ರೂ.ಗೆ ಹಿಗ್ಗಿದ ಪರಿಣಾಮ, ರೈತನೊಬ್ಬ ಕಾಂಬೋಡಿಯಾಗೆ ತೆರಳಿ ತನ್ನ ಕಿಡ್ನಿಯನ್ನು ಮಾರಾಟ ಮಾಡಬೇಕಾದ ಒತ್ತಡಕ್ಕೀಡಾಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಿಂದ ವರದಿಯಾಗಿದೆ.
ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯ ರೈತ ರೋಶನ್ ಸದಾಶಿವ್ ಕುಡೆ ಎಂಬ ರೈತ ನಿರಂತರವಾಗಿ ಕೃಷಿಯಲ್ಲಿ ನಷ್ಟ ಅನುಭವಿಸಿದ್ದರಿಂದ, ಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಅವರು ಇದಕ್ಕಾಗಿ ವಿವಿಧ ಸಾಲಗಾರರಿಂದ ಒಟ್ಟಾರೆ ಒಂದು ಲಕ್ಷ ರೂ. ಸಾಲ ಪಡೆದಿದ್ದಾರೆ.
ಆದರೆ, ಅವರು ತಮ್ಮ ಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸುವುದಕ್ಕೂ ಮುನ್ನವೇ, ಅವರು ಖರೀದಿಸಿದ್ದ ಜಾನುವಾರುಗಳು ಮೃತಪಟ್ಟಿವೆ ಹಾಗೂ ಅವರ ಮಾಲಕತ್ವದ ಭೂಮಿಯಲ್ಲಿನ ಫಸಲು ವಿಫಲಗೊಂಡಿದೆ. ಇದರಿಂದಾಗಿ ಅವರ ಸುತ್ತ ಸಾಲದ ಕುಣಿಕೆ ಬಿಗಿಯಾಗಿದ್ದು, ಸಾಲಗಾರರು ಕುಡೆ ಹಾಗೂ ಅವರ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.
ಹೀಗಾಗಿ, ಕುಡೆ ತಮ್ಮ ಜಮೀನು, ಟ್ರ್ಯಾಕ್ಟರ್ ಹಾಗೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಸಾಲ ತೀರಿಸಲು ಮಾರಾಟ ಮಾಡಿದ್ದಾರೆ. ಆದರೆ, ಅದಷ್ಟೇ ಸಾಲ ತೀರಿಸಲು ಸಾಕಾಗಿಲ್ಲ. ಹೀಗಾಗಿ, ಏಜೆಂಟ್ ಗಳ ಮೂಲಕ ಕೋಲ್ಕತ್ತಾಗೆ ತೆರಳಿರುವ ಕುಡೆ, ವೈದ್ಯಕೀಯ ಪರೀಕ್ಷೆಗಳ ನಂತರ ಕಾಂಬೋಡಿಯಾಗೆ ತೆರಳಿದ್ದು, ಅಲ್ಲಿ 8 ಲಕ್ಷ ರೂ.ಗೆ ತಮ್ಮ ಕಿಡ್ನಿಯನ್ನು ಮಾರಾಟ ಮಾಡಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ಹೋಗಿದ್ದರಿಂದ, ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತಷ್ಟು ಬಿಗಡಾಯಿಸಿತು ಎಂದು ಕುಡೆ ಹೇಳುತ್ತಾರೆ. ಒಂದು ವೇಳೆ ನನಗೆ ಈಗಲೂ ನ್ಯಾಯ ದೊರೆಯದಿದ್ದರೆ, ನಾನು ಹಾಗೂ ನನ್ನ ಕುಟುಂಬದ ಸದಸ್ಯರು ರಾಜ್ಯ ಸರಕಾರದ ಪ್ರಧಾನ ಕೇಂದ್ರವಾದ ಮುಂಬೈನ ಕಾರ್ಯಾಲಯದೆದುರು ಸ್ವಯಂ ಅಗ್ನಿಗಾಹುತಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಲಗಾರರನ್ನು ಕಿಶೋರ್ ಬವಾಂಕುಲೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್ ಪುರೆ ಹಾಗೂ ಲಕ್ಷ್ಮಣ್ ಬೋರ್ಕರ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಬ್ರಹ್ಮಪುರಿ ಪಟ್ಟಣದ ನಿವಾಸಿಗಳಾಗಿದ್ದಾರೆ.







