ಆಯುಷ್ಮಾನ್ ಭಾರತ್ ಯೋಜನೆಯಡಿ 1.21 ಲಕ್ಷ ಕೋಟಿ ಬಾಕಿ: ಐಎಂಎ

PC: PTI
ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಆಸ್ಪತ್ರೆಗೆ ದಾಖಲಾದ 64 ಲಕ್ಷ ರೋಗಿಗಳಿಗೆ ಸಂಬಂಧಿಸಿದಂತೆ 1.21 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರ ಆಸ್ಪತ್ರೆಗಳಿಗೆ ಪಾವತಿಸಬೇಕಾಗಿದೆ ಎಂಬ ಅಂಶವನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಹಿರಂಗಪಡಿಸಿದೆ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸಲ್ಲಿಸಿರುವ ಶ್ವೇತಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ 9.84 ಕೋಟಿ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, 1.40 ಲಕ್ಷ ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಿತ್ತು. ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾಗಿರುವ 55 ಕೋಟಿ ಮಂದಿಗೆ ವಾರ್ಷಿಕ 5 ಲಕ್ಷ ರೂಪಾಯಿವರೆಗಿನ ಚಿಕಿತ್ಸೆಗೆ ನಗದು ರಹಿತ ವ್ಯವಸ್ಥೆ ಲಭ್ಯವಿದೆ. ಅಂದರೆ ದೇಶದ ಶೇಕಡ 40ರಷ್ಟು ಮಂದಿ ಈ ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಾರೆ.
ಇದುವರೆಗೆ 41 ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಅತ್ಯಧಿಕ ಅಂದರೆ 5.33 ಕೋಟಿ, ಮಧ್ಯಪ್ರದೇಶ, ಬಿಹಾರ ಮತ್ತು ಒಡಿಶಾದಲ್ಲೂ ಗಣನೀಯ ಸಂಖ್ಯೆಯಲ್ಲಿ ವಿತರಿಸಲಾಗಿದೆ. ಲಕ್ಷದ್ವೀಪದಲ್ಲಿ ಕನಿಷ್ಠ ಅಂದರೆ 36 ಸಾವಿರ ಕಾರ್ಡ್ ಗಳು ವಿತರಣೆಯಾಗಿವೆ. 31466 ಆಸ್ಪತ್ರೆಗಳ ಮೂಲಕ ಈ ಯೋಜನೆ ಕಾರ್ಯಗತಗೊಳ್ಳುತ್ತಿದ್ದು, 14 ಸಾವಿರ ಖಾಸಗಿ ಆಸ್ಪತ್ರೆಗಳೂ ಟ್ರಸ್ಟ್, ವಿಮೆ ಅಥವಾ ಹೈಬ್ರಿಡ್ ಮಾದರಿಯಲ್ಲಿ ಜಾರಿಯಾಗುತ್ತಿದೆ.
ಆದರೆ ಐಎಂಎ ಸಲ್ಲಿಸಿರುವ ಮನವಿಯಲ್ಲಿ, ಪಾವತಿ ವಿಳಂಬ, ಕಡಿಮೆ ಮರುನೀಡಿಕೆ ಪ್ರಮಾಣ ಮತ್ತು ಸಂಕೀರ್ಣ ಕ್ಲೇಮ್ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದ್ದು, ಇದು ಆಸ್ಪತ್ರೆಗಳ ಹಣಕಾಸು ಸ್ಥಿತಿಗೆ ಅಪಾಯ ತಂದಿದೆ ಎಂದು ವಾದಿಸಿದೆ. ಗುಜರಾತ್ ನಲ್ಲಿ 2021ರಿಂದ 2023 ರ ಅವಧಿಯಲ್ಲಿ 300 ಕೋಟಿ ರೂಪಾಯಿ ಬಾಕಿ ಇದೆ.
15 ದಿನಗಳ ಅವಧಿಯಲ್ಲಿ ಕೇವಲ ಶೇಕಡ 5ರಷ್ಟು ಕ್ಲೇಮ್ಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ. ಕೇರಳದಲ್ಲಿ 400 ಕೋಟಿ ರೂ. ಬಾಕಿ ಇದ್ದು, ದೇಶಾದ್ಯಂತ ಪಟ್ಟು 1.21 ಲಕ್ಷ ಕೋಟಿ ರೂ, ಬಾಕಿ ಇದೆ ಎಂದು ಅಜತ್ ಬಾಸುದೇವ ಬೋಸ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಬಂದ ಉತ್ತರದಲ್ಲಿ ಮಾಹಿತಿ ಲಭ್ಯವಿದೆ ಎಂದು ವಿವರಿಸಲಾಗಿದೆ.
ಪ್ಯಾಕೇಜ್ ದರಗಳು ಕೂಡಾ ತೀರಾ ಕಡಿಮೆ ಎಂದು ಐಎಂಎ ಅಭಿಪ್ರಾಯಪಟ್ಟಿದ್ದು, ಸಂಕೀರ್ಣ ಪ್ರಕರಣಗಳಲ್ಲಿ ಚಿಕಿತ್ಸಾ ವೆಚ್ಚ ಕೂಡಾ ಭರಿಸುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ದರಗಳನ್ನು ನಿಗದಿಪಡಿಸುವ ವೇಳೆ ಐಎಂಎಯನ್ನೂ ಆಹ್ವಾನಿಸಬೇಕು. ಸಕಾಲಿಕ ಪಾವತಿ, ಕ್ಲೇಮ್ ಗಳನ್ನು ಸುಲಲಿತಗೊಳಿಸುವ ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ದಿಲೀಪ್ ಭಾನುಶಾಲಿ ಅಭಿಪ್ರಾಯಪಟ್ಟಿದ್ದಾರೆ.







