ಮಧ್ಯಪ್ರದೇಶ: ಡಾಬಾ ಬಾಣಸಿಗನಿಗೆ 46 ಕೋಟಿ ರೂ. ಐಟಿ ನೋಟಿಸ್!

ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ರಸ್ತೆ ಬದಿಯ ಧಾಬಾವೊಂದರಲ್ಲಿ ಬಾಣಸಿಗನಾಗಿ ಉದ್ಯೋಗ ಮಾಡುತ್ತಿರುವ ವ್ಯಕ್ತಿಯೊಬ್ಬರಿಗೆ ಆದಾಯ ತೆರಿಗೆ ಇಲಾಖೆ 46.18 ಕೋಟಿ ರೂ. ಆದಾಯ ತೆರಿಗೆ ನೋಟಿಸ್ ಜಾರಿಗೊಳಿಸಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಬಾಣಸಿಗನ ಹೆಸರಲ್ಲಿರುವ ಖಾತೆಯಲ್ಲಿ 46.18 ಕೋಟಿ ರೂ. ವಹಿವಾಟು ನಡೆಸಲಾಗಿದೆ ಎಂದು ಈ ನೋಟಿಸ್ ಜಾರಿಗೊಳಿಸಲಾಗಿದೆ.
ಆದರೆ, ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ನಿವಾಸಿಯಾದ ರವೀಂದ್ರ ಸಿಂಗ್ ಚೌಹಾಣ್ ಸದ್ಯ ಗ್ವಾಲಿಯರ್ ನಲ್ಲಿರುವ ಧಾಬಾ ಕಮ್ ಫ್ಯಾಮಿಲಿ ರೆಸ್ಟೋರೆಂಟ್ ಒಂದರಲ್ಲಿ ಬಾಣಸಿಗನಾಗಿ ಉದ್ಯೋಗ ಮಾಡುತ್ತಿದ್ದು, ಇದಕ್ಕೂ ಮುನ್ನ, ಜುಲೈ ತಿಂಗಳವರೆಗೆ ಪ್ರತಿಷ್ಠಿತ ಆಟೊಮೊಬೈಲ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಎನ್ನಲಾಗಿದೆ.
ಆದರೆ, ಯಾವಾಗ ಆದಾಯ ತೆರಿಗೆ ಇಲಾಖೆ ರವೀಂದ್ರ ಸಿಂಗ್ ಚೌಹಾಣ್ ಗೆ ಹಲವು ಆದಾಯ ತೆರಿಗೆ ನೋಟಿಸ್ ಗಳನ್ನು ಜಾರಿಗೊಳಿಸಿತೊ, ಆಗ ಆ ಉದ್ಯೋಗ ತೊರೆದಿದ್ದ ಅವರು, ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ 10,000 ರೂ. ವೇತನ ದೊರೆಯುವ ರಸ್ತೆ ಬದಿಯ ಡಾಬಾ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರವೀಂದ್ರ ಸಿಂಗ್ ಚೌಹಾಣ್, “ನಾನು ಮಾಸಿಕ 10,000 ರೂ. ವೇತನ ಸಂಪಾದಿಸುತ್ತಿದ್ದು, 46 ಕೋಟಿ ರೂ.ಗೂ ಹೆಚ್ಚು ವಹಿವಾಟಿನಲ್ಲಿ ಹೇಗೆ ತೊಡಗಿಸಿಕೊಳ್ಳಲು ಸಾಧ್ಯ?” ಎಂದು ಪ್ರಶ್ನಿಸುತ್ತಾರೆ.
ಇತ್ತೀಚೆಗೆ ಚೌಹಾಣ್ ಅವರಿಗೆ ರವಾನಿಸಲಾಗಿರುವ ಆದಾಯ ತೆರಿಗೆ ಇಲಾಖೆಯ ನೋಟಿಸ್ ನಲ್ಲಿ, “2021-22ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ 2021-21ನೇ ಹಣಕಾಸು ಸಾಲಿನಲ್ಲಿ 46,18,32,916 ರೂ.ವರೆಗಿನ ತೆರಿಗೆ ವಿಧಿಸಬಲ್ಲ ವಹಿವಾಟು ನಡೆಸಿರುವುದು ನಮ್ಮ ಇಲಾಖೆಯ ಬಳಿ ಇರುವ ಮಾಹಿತಿಯಿಂದ ತಿಳಿದು ಬಂದಿದೆ” ಎಂದು ಹೇಳಲಾಗಿದೆ.
2019-2023ರ ನಡುವೆ ಚೌಹಾಣ್ ಗ್ವಾಲಿಯರ್ ಬಳಿ ಇರುವ ಟೋಲ್ ಪ್ಲಾಝಾದಲ್ಲಿ ಮೆಸ್ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದರು. “ನವೆಂಬರ್ 2019ರಲ್ಲಿ ಬಿಹಾರದ ಬಕ್ಸರ್ ಜಿಲ್ಲೆಯ ನಿವಾಸಿಯಾದ ಟೋಲ್ ಪ್ಲಾಝಾ ಮೇಲ್ವಿಚಾರಕ ಶಶಿ ಭೂಷಣ್ ರಾಯ್ ಎಂಬವರು ನಾನು ಭವಿಷ್ಯ ನಿಧಿ ಹಣವನ್ನು ಪಡೆಯಲು ಅನುಕೂಲವಾಗಲೆಂದು, ನನ್ನನ್ನು ದಿಲ್ಲಿಗೆ ಕರೆದೊಯ್ದು ಬ್ಯಾಂಕ್ ಖಾತೆಯೊಂದನ್ನು ತೆರೆಸಿದ್ದರು. ನಾನು ಈ ಕುರಿತು ನನ್ನ ಇತರ ಸಹೋದ್ಯೋಗಿಗಳು ಹಾಗೂ ಸ್ನೇಹಿತರಿಗೆ ಮಾಹಿತಿ ನೀಡಿದಾಗ, ಭವಿಷ್ಯದಲ್ಲಿ ನಿನ್ನ ಬ್ಯಾಂಕ್ ಖಾತೆ ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ, ನೀವು ಆ ಬ್ಯಾಂಕ್ ನಲ್ಲಿ ಖಾತೆ ತೆರೆಯಬಾರದಿತ್ತು ಎಂದು ಅವರೆಲ್ಲ ಹೇಳಿದ್ದರು. ಹೀಗಾಗಿ, ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ನಾನು ಮೇಲ್ವಿಚಾರಕನಲ್ಲಿ ಮನವಿ ಮಾಡಿದೆ. ಅದಕ್ಕೆ ಪ್ರತಿಯಾಗಿ ಆತ ನನ್ನ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದ. ಆದರೆ, ಆರು ವರ್ಷಗಳ ನಂತರ, ದಿಲ್ಲಿಯಲ್ಲಿ ಈಗಲೂ ಸಕ್ರಿಯವಾಗಿರುವ ಬ್ಯಾಂಕ್ ಖಾತೆಯಿಂದ ನಾನು ತೊಂದರೆಗೆ ಸಿಲುಕಿಕೊಂಡಿದ್ದೇನೆ” ಎಂದು ಚೌಹಾಣ್ ಅಳಲು ತೋಡಿಕೊಳ್ಳುವತ್ತಾರೆ.
“ನಾನು ಶಶಿ ಭೂಷಣ್ ರಾಯ್ ವಿರುದ್ಧ ದೂರು ನೀಡಲು ಗ್ವಾಲಿಯರ್ ನ ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಅಲೆಯುತ್ತಿದ್ದೇನೆ. ಆದರೆ, ನನ್ನೊಂದಿಗೆ ಅಪರಾಧ ನಡೆದಿರುವುದು ದಿಲ್ಲಿಯಲ್ಲಾಗಿರುವುದರಿಂದ, ನಾನು ಅಲ್ಲಿನ ಪೊಲೀಸ್ ಠಾಣೆಗೇ ಹೋಗಬೇಕು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ” ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.







