3,000 ಅತ್ಲೀಟ್ ಗಳಿಗೆ ತಿಂಗಳಿಗೆ 50 ಸಾವಿರ ರೂ. ನೆರವು: ಅಮಿತ್ ಶಾ ಘೋಷಣೆ

ಅಮಿತ್ ಶಾ | PTI
ಹೊಸದಿಲ್ಲಿ, ಜು. 18: ಸುಮಾರು 3,000 ಅತ್ಲೀಟ್ ಗಳಿಗೆ ತಿಂಗಳಿಗೆ 50,000 ರೂ. ನೆರವು ನೀಡುವ ಮೂಲಕ 2036ರ ಒಲಿಂಪಿಕ್ಸ್ ಗೆ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಮತ್ತು ಇದಕ್ಕಾಗಿ ವಿವರವಾದ ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಗೇಮ್ಸ್- 2025ರಲ್ಲಿ ಭಾಗವಹಿಸಲಿರುವ ಭಾರತೀಯ ತಂಡದ ಸನ್ಮಾನ ಕಾರ್ಯಕ್ರಮ ಹೊಸದಿಲ್ಲಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅಮಿತ್ ಶಾ, ‘‘ಸೋಲು ಮತ್ತು ಗೆಲುವು ಜೀವನದ ನಿರಂತರ ಚಕ್ರವಾಗಿದೆ. ಗೆಲ್ಲಲು ಗುರಿಯನ್ನು ನಿಗದಿಪಡಿಸುವುದು, ಗೆಲುವಿಗೆ ಯೋಜನೆಯನ್ನು ಹಾಕುವುದು ಪ್ರತಿಯೊಬ್ಬರ ಹವ್ಯಾಸವಾಗಬೇಕು ಮತ್ತು ಗೆಲ್ಲುವುದು ಒಂದು ಅಭ್ಯಾಸವಾಗಬೇಕು’’ ಎಂದು ಹೇಳಿದರು.
ಕ್ರೀಡೆಯನ್ನು ಪ್ರತಿಯೊಂದು ಗ್ರಾಮಕ್ಕೆ ಒಯ್ಯಲು ಮೋದಿ ಸರಕಾರವು ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಗೃಹ ಸಚಿವರು ಹೇಳಿದರು.
‘‘ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಕಳೆದ 10 ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಅದಕ್ಕೆ ನೀಡಲಾಗುತ್ತಿರುವ ಬಜೆಟನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಸರಕಾರವು ಸುಮಾರು 3,000 ಅತ್ಲೀಟ್ ಗಳಿಗೆ ತಿಂಗಳಿಗೆ 50,000 ರೂ. ನೆರವು ನೀಡುವ ಮೂಲಕ 2036ರ ಒಲಿಂಪಿಕ್ಸ್ ಗೆ ಸಿದ್ಧತೆಗಳನ್ನು ನಡೆಸುತ್ತಿದೆ ಹಾಗೂ ಅದಕ್ಕಾಗಿ ವಿವರವಾದ ಯೋಜನೆಯೊಂದನ್ನು ರೂಪಿಸುತ್ತಿದೆ’’ ಎಂದು ಅವರು ನುಡಿದರು.
2036ರ ಒಲಿಂಪಿಕ್ಸ್ ನಲ್ಲಿ ಭಾರತವು ಅಗ್ರ ಐದು ಪದಕ ವಿಜೇತ ದೇಶಗಳ ಪಟ್ಟಿಯಲ್ಲಿರುತ್ತದೆ ಎಂಬ ವಿಶ್ವಾಸವನ್ನು ಅಮಿತ್ ಶಾ ವ್ಯಕ್ತಪಡಿಸಿದರು.







