ಕೇರಳ | ತುಷಾರ್ ಗಾಂಧಿಯನ್ನು ಅಕ್ರಮವಾಗಿ ವಶಕ್ಕೆ ಪಡೆದ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರು

ತುಷಾರ್ ಗಾಂಧಿ (Photo credit: ANI)
ತಿರುವನಂತಪುರ : ಕೇರಳದ ತಿರುವನಂತಪುರ ಜಿಲ್ಲೆಯ ನೇಯಟ್ಟಿಂಕರ ಬಳಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಗುಂಪು ಬುಧವಾರ ಸಂಜೆ ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಅವರನ್ನು ಅಕ್ರಮವಾಗಿ ವಶಕ್ಕೆ ಪಡೆದಿದೆ ಎಂದು ಆರೋಪಿಸಲಾಗಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವುದಲ್ಲದೆ, ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು ಎಂದು thehindu.com ವರದಿ ಮಾಡಿದೆ.
ಶಿವಗಿರಿ ಮಠದ ಆಹ್ವಾನದ ಮೇರೆಗೆ ಕೇರಳಕ್ಕೆ ಬಂದಿದ್ದ ತುಷಾರ್ ಗಾಂಧಿ ನೆಯ್ಯಟ್ಟಿಂಕರದಲ್ಲಿ ದಿವಂಗತ ಗಾಂಧಿವಾದಿ ಗೋಪಿನಾಥನ್ ನಾಯರ್ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ʼಆರೆಸ್ಸೆಸ್ ಮತ್ತು ಸಂಘಪರಿವಾರ ದೇಶದ ಆತ್ಮಕ್ಕೆ ಕ್ಯಾನ್ಸರ್ ಇದ್ದಂತೆ, ನಾವು ಜಾಗರೂಕರಾಗಿರಬೇಕುʼ ಎಂದು ಹೇಳಿದರು.
ಕಾರ್ಯಕ್ರಮದ ನಂತರ ತುಷಾರ್ ಗಾಂಧಿ ವಾಹನದಲ್ಲಿ ತೆರಳಲು ಮುಂದಾದಾಗ ಬಿಜೆಪಿ ಕೌನ್ಸಿಲರ್ ಮಹೇಶ್ ನೇತೃತ್ವದಲ್ಲಿ ಬಿಜೆಪಿ ಆರೆಸ್ಸೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಶಿವಗಿರಿ ಮಠದಲ್ಲಿ ಮಾಡಿದ ಆರೆಸ್ಸೆಸ್ ವಿರೋಧಿ ಭಾಷಣವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಈ ವೇಳೆ ತುಷಾರ್ ಗಾಂಧಿ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. ಆರೆಸ್ಸೆಸ್ ಕಾರ್ಯಕರ್ತರನ್ನುದ್ದೇಶಿಸಿ ʼಆರೆಸ್ಸೆಸ್ ಮುರ್ದಾಬಾದ್ ಮತ್ತು ಗಾಂಧೀಜಿ ಝಿಂದಾಬಾದ್ ಎಂದು ಘೋಷಣೆ ಕೂಗಿದರು.
ʼಗೋಪಿನಾಥನ್ ನಾಯರ್ ಅವರ ಪ್ರತಿಮೆ ಅನಾವರಣ ಸಮಾರಂಭದ ಸಂಘಟನಾ ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿದ್ದು, ತುಷಾರ್ ಗಾಂಧಿ ರಾಜಕೀಯದ ಬಗ್ಗೆ ಮಾತನಾಡುವ ವೇದಿಕೆ ಇದಲ್ಲʼ ಎಂದು ಬಿಜೆಪಿ ಮುಖಂಡರು ಹೇಳಿದರು.