ದಿಲ್ಲಿಯಲ್ಲಿನ ಮುಖ್ಯ ಕಚೇರಿಗೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಲು ಪುರಾತನ ದೇವಾಲಯ ಕೆಡವಿದ ಆರೆಸ್ಸೆಸ್ : ಪ್ರಿಯಾಂಕ ಖರ್ಗೆ, ಸುಪ್ರಿಯಾ ಶ್ರಿನೇತ್ ಆರೋಪ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಝಂಡೇವಾಲ್‌ನಲ್ಲಿರುವ ಆರೆಸ್ಸೆಸ್ ಮುಖ್ಯ ಕಚೇರಿ ಬಳಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಆರೆಸ್ಸೆಸ್ ತನ್ನ ಕಟ್ಟಡದ ಬಳಿ ವಾಹನ ನಿಲುಗಡೆಗೆ ಜಾಗವನ್ನು ನಿರ್ಮಿಸಲು ಪುರಾತನ ದೇವಾಲಯವೊಂದನ್ನು ನೆಲಸಮಗೊಳಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ. ಆದರೆ ಸೂಕ್ತ ನಿಯಮಗಳನ್ನು ಅನುಸರಿಸಿ ಒತ್ತುವರಿ ತೆರವು ಕ್ರಮಕೈಗೊಳ್ಳಲಾಗಿದೆ ಎಂದು ದಿಲ್ಲಿ ನಗರ ಪಾಲಿಕೆ ಸಮರ್ಥಿಸಿಕೊಂಡಿದೆ. 45 ದಿನಗಳ ಹಿಂದೆ ಸ್ಥಳ ತೆರವುಗೊಳಿಸುವಂತೆ ನೋಟಿಸ್ ಜಾರಿಗೊಳಿಸಿದ ಬಳಿಕ ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ದಿಲ್ಲಿ ನಗರ ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ನೆಲಸಮ ಕಾರ್ಯಾಚರಣೆ ರಾಜಕೀಯ ವಿವಾದಕ್ಕೆ ತಿರುಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಖಾತೆ ಸಚಿವ ಪ್ರಿಯಾಂಕ್ ಖರ್ಗೆ, "ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಬಳಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲು ಪುರಾತನ ದೇವಾಲಯವೊಂದನ್ನು ನೆಲಸಮಗೊಳಿಸಲಾಗಿದೆ" ಎಂದು ಆರೋಪಿಸಿದ್ದಾರೆ. ವಿಶ್ವದ ಅತಿದೊಡ್ಡ NGO ಎಂದು ಹೇಳಿಕೊಳ್ಳುವ ಆರೆಸ್ಸೆಸ್ ದೇವಾಲಯವನ್ನು ಕೆಡವಿ, ಪಾರ್ಕಿಂಗ್ ಸ್ಥಳವನ್ನು ಸೃಷ್ಟಿಸುತ್ತಿದೆ. ಹಿಂದೂ ಹೃದಯ ಸಾಮ್ರಾಟ್‌ಗಳು ಮತ್ತು ಬುಲ್ಡೋಝರ್ ಬಾಬಾಗಳು ಎಂದು ಕರೆಯಲ್ಪಡುವವರು ಯಾಕೆ ಮೌನವಾಗಿದ್ದಾರೆ? ಬೆನ್ನುಮೂಳೆಯಿಲ್ಲದ ಇವರು ವೇದಿಕೆಗಳು ಮತ್ತು ಮೆರವಣಿಗೆಗಳಲ್ಲಿ ಮಾತ್ರ ಘರ್ಜಿಸುತ್ತಾರೆ ಎಂದು ಹೇಳಿದ್ದಾರೆ.
ಈ ವಿಷಯದ ಕುರಿತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಕೂಡ ಪ್ರತಿಕ್ರಿಯಿಸಿದ್ದು, ವೈರಲ್ ವೀಡಿಯೊದಲ್ಲಿ ಹೇಳಲಾಗಿರುವ ಸಂಗತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಜನರಿಗೆ ಕರೆ ನೀಡಿದ್ದಾರೆ. "ದಿಲ್ಲಿಯಲ್ಲಿರುವ ಆರೆಸ್ಸೆಸ್ ಪ್ರಧಾನ ಕಚೇರಿಯಲ್ಲಿ ಪಾರ್ಕಿಂಗ್ ಸ್ಥಳದ ಕೊರತೆಯಿಂದಾಗಿ, 1400 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಕೆಡವಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಹಿಂದೂಗಳೇ ಎಚ್ಚರಗೊಳ್ಳಿ ಮತ್ತು ಸ್ವಯಂ ಘೋಷಿತ ಧಾರ್ಮಿಕ ಗುತ್ತಿಗೆದಾರರ ಬಗ್ಗೆ ಎಚ್ಚರದಿಂದಿರಿ. ಇವರು ಸನಾತನ ಧರ್ಮದ ದೊಡ್ಡ ಶತ್ರುಗಳು" ಎಂದು ಸುಪ್ರಿಯಾ ಶ್ರಿನೇತ್ ಹೇಳಿದ್ದಾರೆ.







