ಕೇರಳ | ತುಷಾರ್ ಗಾಂಧಿ ಹೇಳಿಕೆಯ ವಿರುದ್ಧ ಪ್ರತಿಭಟನೆ: ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ತುಷಾರ್ ಗಾಂಧಿ | PTI
ತಿರುವನಂತಪುರಂ: ಆರೆಸ್ಸೆಸ್ ಅನ್ನು ವಿಷವೆಂದು ಬಣ್ಣಿಸಿದ್ದ ಮಹಾತ್ಮ ಗಾಂಧಿಯ ಮರಿ ಮೊಮ್ಮಗ ತುಷಾರ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘಟನೆಯನ್ನು ತೀವ್ರವಾಗು ಖಂಡಿಸಿದ ನಂತರ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆಗ್ರಹಿಸಿದ ನಂತರ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬುಧವಾರ ಸಂಜೆ ತಿರುವನಂತಪುರಂ ಉಪನಗರದಲ್ಲಿನ ನೆಯ್ಯಾಂಟಿಕರದಲ್ಲಿ ಗಾಂಧಿವಾದಿ ಗೋಪಿನಾಥನ್ ನಾಯರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ್ದ ತುಷಾರ್ ಗಾಂಧಿ, ಆರೆಸ್ಸೆಸ್ ಅನ್ನು ವಿಷ ಎಂದು ಹೇಳಿಕೆ ನೀಡಿದ್ದರು.
“ನಾವು ಬಿಜೆಪಿಯನ್ನು ಪರಾಭವಗೊಳಿಸಲು ಸಾಧ್ಯ. ಆದರೆ, ಆರೆಸ್ಸೆಸ್ ವಿಷವಾಗಿದೆ. ಇದೇನಾದರೂ ದೇಶದ ನಾಡಿ ವ್ಯವಸ್ಥೆಯಲ್ಲಿ ಸೇರಿಕೊಂಡರೆ, ಎಲ್ಲವೂ ಕಳೆದು ಹೋಗಲಿದೆ. ಹೀಗಾಗಿ, ನಾವು ಅದರ ಬಗ್ಗೆ ತುಂಬಾ ಎಚ್ಚರದಿಂದಿರಬೇಕು. ಆರೆಸ್ಸೆಸ್ ಬ್ರಿಟಿಷರ ಆಡಳಿತಕ್ಕಿಂತ ಹೆಚ್ಚು ಅಪಾಯಕಾರಿ” ಎಂದು ತುಷಾರ್ ಗಾಂಧಿ ತಮ್ಮ ಭಾಷಣದಲ್ಲಿ ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ತುಷಾರ್ ಗಾಂಧಿಯ ಈ ಹೇಳಿಕೆ ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಗುಂಪೊಂದು, ತುಷಾರ್ ಗಾಂಧಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ, ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿತ್ತು. ಆದರೆ, ತುಷಾರ್ ಗಾಂಧಿ ಅದಕ್ಕೆ ಮಣಿದಿರಲಿಲ್ಲ. ಈ ಘಟನೆಯ ಸಂಬಂಧ ಗುರುವಾರ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ಈವರೆಗೆ ಯಾರನ್ನೂ ಈ ಪ್ರಕರಣದಲ್ಲಿ ಹೆಸರಿಸಿಲ್ಲ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತುಷಾರ್ ಗಾಂಧಿ ವಿರುದ್ಧದ ಪ್ರತಿಭಟನೆ ದೇಶದ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯ ಮೇಲಿನ ಹಲ್ಲೆಯಾಗಿದೆ ಎಂದು ಖಂಡಿಸಿದ್ದಾರೆ.
“ತುಷಾರ್ ಗಾಂಧಿ ವಿರುದ್ಧ ಪ್ರತಿಭಟಿಸಿದವರ ಮನಸ್ಥಿತಿ ಗಾಂಧೀಜಿಯನ್ನು ಹತ್ಯೆಗೈದವರಿಗಿಂತ ಭಿನ್ನವಾಗಿಲ್ಲ” ಎಂದೂ ಅವರು ಟೀಕಿಸಿದ್ದಾರೆ.
“ತುಷಾರ್ ಗಾಂಧಿ ಏನು ಹೇಳಿದ್ದಾರೆ ಅದು ರಾಜಕೀಯ ವಾಸ್ತವವಾಗಿದೆ. ಅವರ ಮೇಲಿನ ಹಲ್ಲೆಯನ್ನು ಗಾಂಧೀಜಿಗೆ ಮಾಡಿದ ಅವಮಾನ ಎಂದು ಪರಿಗಣಿಸಬೇಕು” ಎಂದು ಕೇರಳ ವಿಧಾನಸಭಾ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕ ವಿ.ಡಿ.ಸತೀಶನ್ ಆಗ್ರಹಿಸಿದ್ದಾರೆ.
ಕಾಕತಾಳೀಯವೆಂಬಂತೆ, ತುಷಾರ್ ಗಾಂಧಿ ವಿರುದ್ಧ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ದಿನವು ತಿರುವನಂತಪುರಂನ ಉಪನಗರದಲ್ಲಿನ ಶಿವಗಿರಿಯಲ್ಲಿ ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರುಗಳನ್ನು ಗಾಂಧೀಜಿ ಭೇಟಿ ಮಾಡಿದ್ದ ಶತಮಾನೋತ್ಸವ ದಿನವಾಗಿದೆ. ಈ ಸಂಬಂಧ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲೂ ತುಷಾರ್ ಗಾಂಧಿ ಭಾಗವಹಿಸಿದ್ದರು.