ಸಂವಿಧಾನದ ಪ್ರಸ್ತಾವನೆಯಿಂದ 'ಸಮಾಜವಾದಿ, ಜಾತ್ಯಾತೀತ' ಪದ ಕೈಬಿಡಿ: ಆರೆಸ್ಸೆಸ್ ಆಗ್ರಹ

PC ; PTI
ಹೊಸದಿಲ್ಲಿ: ಸಂವಿಧಾನದ ಪ್ರಸ್ತಾವನೆಯಿಂದ 'ಸಮಾಜವಾದಿ' ಹಾಗೂ 'ಜಾತ್ಯಾತೀತ ಪದಗಳನ್ನು ಕೈಬಿಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.
ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ, ದಿ. ಇಂದಿರಾ ಗಾಂಧಿ ಅವರು 1975ರ ಜೂನ್ 25ರಂದು ತುರ್ತುಪರಿಸ್ಥಿತಿ ಹೇರಿದ್ದರು. ಆ ಸಂದರ್ಭದಲ್ಲಿ 'ಸಮಾಜವಾದಿ' ಹಾಗೂ 'ಜಾತ್ಯಾತೀತ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
'ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾವಿರಾರು ಜನರನ್ನು ಜೈಲಿಗಟ್ಟಲಾಗಿತ್ತು. ನ್ಯಾಯಾಂಗ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು' ಎಂದೂ ಆರೋಪಿಸಿದ್ದಾರೆ.
50 ವರ್ಷಗಳ ಹಿಂದೆ ತುರ್ತುಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರ ಕ್ಷಮೆಯಾಚಿಸಬೇಕು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂತಹ ಕೆಲಸ ಮಾಡಿದವರು ಇಂದು ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈಗಲೂ ಅವರು ಕ್ಷಮೆ ಕೋರಿಲ್ಲ' ಎಂದು ದತ್ತಾತ್ರೇಯ ಹೊಸಬಾಳೆ ಅವರು ಕಿಡಿಕಾರಿದ್ದಾರೆ.







