ಪಂಜಾಬ್ | ಆರೆಸ್ಸೆಸ್ ನಾಯಕನ ಪುತ್ರನ ಗುಂಡಿಕ್ಕಿ ಹತ್ಯೆ

Photo Credit ; indianexpress.com
ಫಿರೋಝ್ಪುರ, ನ. 16: ಆರೆಸ್ಸೆಸ್ ನಾಯಕನ ಪುತ್ರರೋರ್ವರನ್ನು ಮೋಟಾರು ಸೈಕಲ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಮೃತನನ್ನು ನವೀನ್ ಅರೋರಾ (32) ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ನವೀನ್ ಅರೋರಾ ಅವರ ತಂದೆ ಬಲದೇವ್ ರಾಜ್ ಅರೋರಾ ಅವರು ಕಳೆದ ಹಲವು ವರ್ಷಗಳಿಂದ ಆರೆಸ್ಸೆಸ್ ನೊಂದಿಗೆ ಸಂಬಂಧ ಹೊಂದಿದ್ದರು.
ನವೀನ್ ಅರೋರಾ ಶನಿವಾರ ತನ್ನ ಅಂಗಡಿಯಿಂದ ಡಾ. ಸಾಧು ಚೌಕದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.
ಮೋಟಾರು ಸೈಕಲ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ಯುವಕರು ನವೀನ್ ಅರೋರಾ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾದರು. ನವೀನ್ ಅರೋರಾ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಘಟನೆ ವರದಿಯಾದ ಕೂಡಲೇ, ಹಿರಿಯ ಪೊಲೀಸ್ ವರಿಷ್ಠ ಭೂಪಿಂದರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಹಾಗೂ ಪರಿಸ್ಥಿತಿ ಅವಲೋಕಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







