ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗೆ ಮಾಸಿಕ 2.5 ಲಕ್ಷ ಗೌರವ ಧನ!
ಬಯೋಡೇಟಾ ಕೋರಿ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಉತ್ತರವಿಲ್ಲ

ಚಾಮುಕೃಷ್ಣ ಶಾಸ್ತ್ರಿ | PC : telegraphindia.com
ಹೊಸದಿಲ್ಲಿ: 2021ರಲ್ಲಿ ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದ ಆರೆಸ್ಸೆಸ್ ಹಿನ್ನೆಲೆಯ ಚಾಮುಕೃಷ್ಣ ಶಾಸ್ತ್ರಿಗೆ ಮಾಸಿಕ 2.5 ಲಕ್ಷ ರೂ. ಗೌರವ ಧನ ನೀಡಲಾಗಿದ್ದು, ಅವರ ಸ್ವವಿವರವನ್ನು ಒದಗಿಸುವಂತೆ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು telegraphindia.com ವರದಿ ಮಾಡಿದೆ.
ನವೆಂಬರ್, 2021ರಲ್ಲಿ ಭಾರತೀಯ ಭಾಷೆಗಳ ಪ್ರಚಾರಕ್ಕೆ ಸಲಹೆ ಪಡೆಯಲು ಕೇಂದ್ರ ಶಿಕ್ಷಣ ಸಚಿವಾಲಯ ರಚಿಸಿದ್ದ ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಚಾಮುಕೃಷ್ಣ ಶಾಸ್ತ್ರಿ ಅವರಿಗೆ ಡಿಸೆಂಬರ್ 2023ರಿಂದ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿಗೆ ಪಾವತಿಸುವ ವೇತನಕ್ಕಿಂತ ಹೆಚ್ಚು ಪಾವತಿಸಿರುವ ಅಂಶ ಬೆಳಕಿಗೆ ಬಂದಿದೆ.
ಚಾಮುಕೃಷ್ಣ ಶಾಸ್ತ್ರಿ ಅವರಿಗೆ ಈ ಪ್ರಮಾಣದ ವೇತನವನ್ನು ನಿಗದಿಗೊಳಿಸಲು ಯಾವ ಸೂತ್ರವನ್ನು ಅನುಸರಿಸಲಾಗಿದೆ ಎಂಬ ಕುರಿತು ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಅರ್ಜಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ಬದಿಗಿರಿಸಿದೆ ಎಂದು ಹೇಳಲಾಗಿದೆ.
ಚಾಮುಕೃಷ್ಣ ಶಾಸ್ತ್ರಿ ಅವರು ಮಕ್ಕಳಿಗೆ ಶಿಬಿರಗಳನ್ನು ಆಯೋಜಿಸುವಂಥ ಕ್ರಮಗಳನ್ನು ಮೂಲಕ ಸಂಸ್ಕೃತ ಭಾಷೆಯನ್ನು ಕಲಿಸುವ ಪ್ರಯತ್ನಗಳನ್ನು ನಡೆಸುತ್ತಿರುವ ಆರೆಸ್ಸೆಸ್ ಅಂಗಸಂಸ್ಥೆ ಸಂಸ್ಕೃತ ಭಾರತಿಯ ಸದಸ್ಯರಾಗಿದ್ದಾರೆ.
ಭಾರತೀಯ ಭಾಷಾ ಸಮಿತಿಯು ಮಾಜಿ ಅಧಿಕಾರಿಗಳಾದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ನಿರ್ದೇಶಕರು ಹಾಗೂ ಹೊಸ ದಿಲ್ಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಸೇರಿದಂತೆ ಇನ್ನಿಬ್ಬರು ಸದಸ್ಯರನ್ನೂ ಒಳಗೊಂಡಿದೆ.
ಈ ಸಮಿತಿಯ ಎಲ್ಲ ಸದಸ್ಯರು ಗೌರವಾರ್ಥ ಸಾಮರ್ಥ್ಯದ ಮೇಲೆ ತಮ್ಮ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭಾರತೀಯ ಭಾಷಾ ಸಮಿತಿಯನ್ನು ರಚಿಸಿದ ಶಿಕ್ಷಣ ಸಚಿವಾಲಯದ ನವೆಂಬರ್ 15, 2021ರ ಆದೇಶದಲ್ಲಿ ಹೇಳಲಾಗಿದೆ. ಆದರೆ, ಡಿಸೆಂಬರ್, 2023ರಿಂದ ಯಾವುದೇ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಪಾವತಿಸುವ 2.1 ಲಕ್ಷ ರೂ. ವೇತನಕ್ಕಿಂತ ಅಧಿಕ ಗೌರವ ಧನವಾದ 2.5 ಲಕ್ಷ ರೂ. ಅನ್ನು ಚಾಮುಕೃಷ್ಣ ಶಾಸ್ತ್ರಿ ಅವರಿಗೆ ಪಾವತಿಸಲಾಗಿದೆ ಎಂದು ಹೇಳಲಾಗಿದೆ.
ಮಾಹಿತಿ ಹಕ್ಕು ಅರ್ಜಿಯ ಮೂಲಕ ಪಡೆಯಲಾಗಿರುವ ದಾಖಲೆಗಳ ಪ್ರಕಾರ, ಚಾಮುಕೃಷ್ಣ ಶಾಸ್ತ್ರಿ ಅವರಿಗೆ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ಧಾರದಂತೆ ಸರಕಾರ ವಾಸ್ತವ್ಯವನ್ನೂ ಒದಗಿಸಿರುವುದು ಬೆಳಕಿಗೆ ಬಂದಿದೆ.
ನವೆಂಬರ್ 15ರಂದು ರಚಿಸಿದ್ದ ಭಾರತೀಯ ಭಾಷಾ ಸಮಿತಿಯ ಆದೇಶ ಹಾಗೂ ಅದರ ಅಧ್ಯಕ್ಷರ ಅವಧಿಯನ್ನು ವಿಸ್ತರಿಸಿ, ಚಾಮುಕೃಷ್ಣ ಶಾಸ್ತ್ರಿ ಅವರಿಗೆ 2.5 ಲಕ್ಷ ರೂ. ಗೌರವ ಧನ ಪಾವತಿಯನ್ನು ಘೋಷಿಸಿರುವ ಆದೇಶದ ಪ್ರತಿಯನ್ನೂ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗಿದ್ದ ಮಾಹಿತಿಗೆ ಪ್ರತಿಯಾಗಿ ಕೇಂದ್ರ ಶಿಕ್ಷಣ ಸಚಿವಾಲಯ ಒದಗಿಸಿದೆ.
ಆದರೆ, The Telegraph ದಿನಪತ್ರಿಕೆ ಕೋರಿದ್ದ ಮಾಹಿತಿಯನ್ವಯ, ಚಾಮುಕೃಷ್ಣ ಶಾಸ್ತ್ರಿ ಅವರ ಸ್ವವಿವರವನ್ನಾಗಲಿ ಅಥವಾ ಯಾವ ಆಧಾರದಲ್ಲಿ ಚಾಮುಕೃಷ್ಣ ಶಾಸ್ತ್ರಿಯ ಗೌರವ ಧನವನ್ನು ನಿಗದಿಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಒದಗಿಸಲು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ವಿಫಲಗೊಂಡಿದ್ದಾರೆ ಎಂದು ಹೇಳಲಾಗಿದೆ.
ಚಾಮುಕೃಷ್ಣ ಶಾಸ್ತ್ರಿ ಅವರ ಸ್ವವಿವರ ಹಾಗೂ ಇನ್ನಿತರ ವಿವರಗಳನ್ನು ಕೋರಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ಸುಮನ್ ದೀಕ್ಷಿತ್ ಅವರಿಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಈ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ ಎಂಬ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ.
“ಮಾಹಿತಿಗೆ ಸಂಬಂಧಿಸಿದ ವಸ್ತುನಿಷ್ಠ ವಿಷಯಗಳು ಹಾಗೂ ಒದಗಿಸಿದ ಮಾಹಿತಿಯ ದೃಷ್ಟಿಕೋನದ ಆಧಾರದಲ್ಲಿ ಮೇಲ್ಮನವಿಯನ್ನು ಪರಿಶೀಲಿಸಲಾಗಿದೆ” ಎಂದೂ ಈ ಪ್ರತಿಕ್ರಿಯೆಯಲ್ಲಿ ಹೇಳಲಾಗಿದೆ.
“ಲಭ್ಯವಿರುವ ಮಾಹಿತಿಗಳನ್ನು ಒದಗಿಸಲಾಗಿದೆ ಎಂಬ ವಿಚಾರವನ್ನು ಉನ್ನತ ಶಿಕ್ಷಣ ಇಲಾಖೆಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಎಲ್-11) ದಾಖಲೆಗಳನ್ನು ಆಧರಿಸಿ ಪರಿಗಣಿಸಲಾಗಿದೆ” ಎಂದೂ ಈ ಪ್ರತಿಕ್ರಿಯೆಯಲ್ಲಿ ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಅಧಿಕಾರಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯವೊಂದರಲ್ಲಿ ಮಾನವೀಯ ಶಾಸ್ತ್ರದ ಪ್ರಾಧ್ಯಾಪಕರಾಗಿ ನಿರ್ವಹಿಸಿದ್ದ ವ್ಯಕ್ತಿಯೊಬ್ಬರು, ಯಾವುದೇ ಶೈಕ್ಷಣಿಕ, ಸಾಂಸ್ಥಿಕ ಅಥವಾ ಸಮಿತಿಗೆ ನೇಮಕ ಮಾಡುವಾಗ, ಸಂಬಂಧಿತ ವ್ಯಕ್ತಿಗಳ ಸ್ವವಿವರಗಳನ್ನು ಸರಕಾರ ನಿಯಮಿತವಾಗಿ ಸಂಗ್ರಹಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಹಕ್ಕು ಅರ್ಜಿಗೆ ಲಭ್ಯವಾಗಿರುವ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಭಾರತೀಯ ಭಾಷಾ ಸಮಿತಿಯ ನಡುವೆ ನಡೆದಿರುವ ಕಚೇರಿ ಟಿಪ್ಪಣಿಗಳ ಸಂವಹನದ ಪ್ರಕಾರ, ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿನ ಸಮಾಲೋಚಕರೊಬ್ಬರು ಅಧ್ಯಕ್ಷರಿಗೆ ಮಾಸಿಕ 2.5 ಲಕ್ಷ ರೂ. ಗೌರವ ಧನ ಪಾವತಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವ ಸೂತ್ರವನ್ನು ಆಧರಿಸಿ ಈ ಗೌರವ ವೇತನದ ಲೆಕ್ಕಾಚಾರ ಮಾಡಲಾಗಿದೆ ಎಂಬ ಕುರಿತು ಈ ದಾಖಲೆಗಳು ಮೌನ ವಹಿಸಿವೆ.
ನವೆಂಬರ್ 2021ರಿಂದ ಡಿಸೆಂಬರ್ 2023ವರೆಗೆ ಎರಡು ವರ್ಷಗಳ ಕಾಲ ಚಾಮುಕೃಷ್ಣ ಶಾಸ್ತ್ರಿ ಅವರು ಯಾವುದೇ ಸಂಭಾವನೆ ಸ್ವೀಕರಿಸಿಲ್ಲ ಎಂದೂ ಒಂದು ಕಚೇರಿ ಟಿಪ್ಪಣಿಯಲ್ಲಿ ನಮೂದಿಸಲಾಗಿದೆ.
ಚಾಮುಕೃಷ್ಣ ಶಾಸ್ತ್ರಿ ಅವರು ಪ್ರಖ್ಯಾತ ಸಂಸ್ಕೃತ ವಿದ್ವಾಂಸ ಎಂದು ಅವರ ಕುರಿತ ವಿವರಣೆಯಲ್ಲಿ ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಪ್ರಾಧ್ಯಾಪಕರೊಬ್ಬರು, ಇದುವರೆಗೆ ಯಾವುದೇ ಶೈಕ್ಷಣಿಕ ವಾರ್ತಾಪತ್ರದಲ್ಲಿ ಅತ್ಯಂತ ಸೂಕ್ಷ್ಣವಾಗಿ ಪರಾಮರ್ಶೆಗೊಳಗಾಗಿರುವ ಚಾಮುಕೃಷ್ಣ ಶಾಸ್ತ್ರಿ ಅವರ ಯಾವುದೇ ಸಂಶೋಧನೆಗಳು ಪ್ರಕಟಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ತಮ್ಮ ಅಭ್ಯರ್ಥಿಯಾಗಿದ್ದ ಚಾಮುಕೃಷ್ಣ ಶಾಸ್ತ್ರಿ ಅವರ ವೇತನ ಹಾಗೂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ಕಾಲ ವಿಸ್ತರಿಸುವ ಪ್ರಸ್ತಾವನೆಗಳನ್ನು ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಂತಿಮಗೊಳಿಸಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಮತ್ತೊಂದು ಆದೇಶವನ್ನು ಹೊರಡಿಸುವ ಮೂಲಕ, ಅವರ ಸೇವಾವಧಿಯನ್ನು ಇನ್ನೂ ಮೂರು ವರ್ಷಗಳ ಕಾಲ ವಿಸ್ತರಿಸಿತ್ತು ಎಂದು ಮೂಲಗಳು ತಿಳಿಸಿವೆ ಎಂದು telegraphindia.com ವರದಿ ಮಾಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಬಳಿ ಏಕೆ ಚಾಮುಕೃಷ್ಣ ಶಾಸ್ತ್ರಿಯ ಸ್ವವಿವರಗಳಿಲ್ಲ ಹಾಗೂ ಅವರು ಪ್ರಕಟಿಸಿದ್ದ ಯಾವ ಸಂಶೋಧನಾ ಪ್ರಬಂಧವನ್ನು ಆಧರಿಸಿ ಅವರನ್ನು ಭಾಷಾ ಭಾರತಿ ಸಮಿತಿಯ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಯಿತು ಹಾಗೂ ಕೇಂದ್ರ ಶಿಕ್ಷಣ ಸಚಿವಾಲಯವೇಕೆ ಅವರಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಪರಿಗಣಿಸಿತು ಎಂದು ಕೋರಿ ಎಪ್ರಿಲ್ 22ರಂದು ರವಾನಿಸಿದ್ದ ಇಮೇಲ್ ಗೆ ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು telegraphindia.com ವರದಿ ಮಾಡಿದೆ.







