ಎಸ್ಐಆರ್ ಬಗ್ಗೆ ಕಳವಳ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ಆರೆಸ್ಸೆಸ್ ಸಂಯೋಜಿತ ಶಿಕ್ಷಕರ ಸಂಘದ ಪತ್ರ

Photo credit: PTI
ಹೊಸದಿಲ್ಲಿ: ಆರೆಸ್ಸೆಸ್ ಸಂಯೋಜಿತ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು (ಎಬಿಆರ್ಎಸ್ಎಂ) ಪ್ರಸ್ತುತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಕಳವಳವನ್ನು ವ್ಯಕ್ತಪಡಿಸಿ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಕಟುವಾದ ಪತ್ರವನ್ನು ಬರೆದಿದೆ. ಎಸ್ಐಆರ್ ಗಡುವನ್ನು ವಿಸ್ತರಿಸಬೇಕು ಮತ್ತು ಈ ಪ್ರಕ್ರಿಯೆ ಸಂದರ್ಭದಲ್ಲಿ ಮೃತಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒಗಳು) ಒಂದು ಕೋಟಿ ರೂ.ಪರಿಹಾರವನ್ನು ನೀಡಬೇಕು ಎಂದು ಅದು ಒತ್ತಾಯಿಸಿದೆ.
ಬಿಎಲ್ಒಗಳ ಮೇಲಿನ ಕೆಲಸದ ಹೊರೆಯನ್ನು ‘ಅನೈತಿಕ’ ಮತ್ತು ಗುರಿಗಳನ್ನು ‘ಅವಾಸ್ತವಿಕ’ ಎಂದು ಬಣ್ಣಿಸಿರುವ ಎಬಿಆರ್ಎಸ್ಎಂ, ಬಿಎಲ್ಒಗಳಾಗಿ ನೇಮಕಗೊಂಡಿರುವ ಶಿಕ್ಷಕರು ಎದುರಿಸುತ್ತಿರುವ ಒತ್ತಡ ಮತ್ತು ಬೆದರಿಕೆ ಚುನಾವಣೆಗಳ ಘನತೆ ಮತ್ತು ಬೋಧಕ ಸಮುದಾಯದ ಗೌರವ ಎರಡಕ್ಕೂ ವಿರುದ್ಧವಾಗಿವೆ ಎಂದು ಹೇಳಿದೆ.
1988ರಲ್ಲಿ ಸ್ಥಾಪನೆಯಾದ ಎಬಿಆರ್ಎಸ್ಎಂ ಪ್ರಕಾರ ಅದು 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 13.5 ಲಕ್ಷ ಶಿಕ್ಷಕರ ಸದಸ್ಯತ್ವವನ್ನು ಹೊಂದಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಎಬಿಆರ್ಎಸ್ಎಂ, ಎಸ್ಐಆರ್ ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಿರ್ಣಾಯಕವಾಗಿದೆ ಮತ್ತು ಮತದಾರರ ಪಟ್ಟಿಗಳ ನಿಖರತೆಯು ನ್ಯಾಯಸಮ್ಮತ ಚುನಾವಣೆಗಳ ಮೂಲಾಧಾರವಾಗಿದೆ, ಬೋಧಕ ಸಮುದಾಯವು ಯಾವಾಗಲೂ ಈ ರಾಷ್ಟ್ರೀಯ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿದೆ ಎಂದು ಹೇಳಿದೆ.
ಆದಾಗ್ಯೂ ಬಿಎಲ್ಒಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿರುವ ಅದು, ಎಸ್ಐಆರ್ ಪ್ರಕ್ರಿಯೆಯು ಅತಿಯಾದ ಕೆಲಸದ ಹೊರೆ, ದೈನಂದಿನ 18 ಗಂಟೆಗಳ ಕಾಲ ಕ್ಷೇತ್ರ ಮತ್ತು ಪೋರ್ಟಲ್ ಕೆಲಸ ಹಾಗೂ ತಾಂತ್ರಿಕ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವ ಬಿಎಲ್ಒಗಳಲ್ಲಿ ಖಿನ್ನತೆ, ಒತ್ತಡ ಮತ್ತು ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬೆಟ್ಟುಮಾಡಿದೆ.
ಹಲವಾರು ರಾಜ್ಯಗಳಲ್ಲಿ ಅಧಿಕಾರಿಗಳ ನಿಂದನೀಯ ನಡವಳಿಕೆಯು ಬಿಎಲ್ಒ ಶಿಕ್ಷಕರಲ್ಲಿ ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ. ದುಃಖಕರವೆಂದರೆ ಕೆಲವು ಪ್ರಕರಣಗಳು ಆತ್ಮಹತ್ಯೆಗಳಲ್ಲಿ ಪರ್ಯವಸಾನಗೊಂಡಿವೆ. ಇದು ಬೋಧಕ ಸಮುದಾಯಕ್ಕೆ ತೊಂದರೆಯನ್ನುಂಟು ಮಾಡಿರುವುದು ಮಾತ್ರವಲ್ಲ,ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ. ಈ ಆಡಳಿತಾತ್ಮಕ ಪದ್ಧತಿಯು ಪ್ರಜಾಪ್ರಭುತ್ವ ಸಂಸ್ಥೆಗಳ ನೈತಿಕ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಕೆಲವೊಮ್ಮೆ ಜನರ ಬಳಿ ಅವರ 20 ವರ್ಷ ಹಳೆಯ ದಾಖಲೆಗಳಿರುವುದಿಲ್ಲ. ಹೀಗಾಗಿ ಅವರು ಬಿಎಲ್ಒಗಳೊಂದಿಗೆ ಸಹಕರಿಸುವುದಿಲ್ಲ ಮತ್ತು ಕೆಲವೊಮ್ಮೆ ಅಶಿಷ್ಟವಾಗಿ ವರ್ತಿಸುತ್ತಾರೆ. ಈ ಹೊಸ, ಆಳವಾದ ಸಮೀಕ್ಷೆಯ ಕುರಿತು ಚುನಾವಣಾ ಆಯೋಗವು ಜನರಿಗೆ ಸಾಕಷ್ಟು ಮಾಹಿತಿಯನ್ನು ನೀಡಿಲ್ಲ ಎಂದು ಎಬಿಆರ್ಎಸ್ಎಂ ಹೇಳಿದೆ.
ಬಿಎಲ್ಒಗಳು ಆತ್ಮಹತ್ಯೆ ಮಾಡಿಕೊಂಡ ಎಲ್ಲ ಪ್ರಕರಣಗಳಲ್ಲಿ ಉನ್ನತ ಮಟ್ಟದಲ್ಲಿ ತನಿಖೆಯನ್ನು ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅದು ಆಗ್ರಹಿಸಿದೆ.







