ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ; ಪ್ರತಿ ಡಾಲರ್ಗೆ 92 ರೂ.!

ಸಾಂದರ್ಭಿಕ ಚಿತ್ರ (AI)
ಮುಂಬೈ: ಇಂದು (ಗುರುವಾರ) ಬೆಳಿಗ್ಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡು, ಪ್ರತಿ ಡಾಲರ್ಗೆ 92 ರೂ. ಮಟ್ಟಕ್ಕೆ ಇಳಿಯಿತು. ಡಾಲರ್ಗೆ ಇರುವ ಸ್ಥಿರ ಬೇಡಿಕೆ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿನ ಎಚ್ಚರಿಕೆಯ ಮನಸ್ಥಿತಿಯೇ ಈ ಇಳಿಕೆಗೆ ಕಾರಣವಾಗಿದೆ.
ಡಾಲರ್ ಸೂಚ್ಯಂಕವು ಎರಡು ವರ್ಷಗಳ ಕನಿಷ್ಠ ಮಟ್ಟದಿಂದ ಏರಿಕೆ ಕಂಡಿರುವುದು ಹಾಗೂ 2026ರ ನೀತಿ ನಿರ್ಣಯದ ಬಳಿಕ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವುದಾಗಿ ಫೆಡರಲ್ ಬ್ಯಾಂಕ್ ಪ್ರಕಟಿಸಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಜಾಗತಿಕ ಅನಿಶ್ಚಿತತೆಯಿಂದ ಅಪಾಯ ತಪ್ಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಕರೆನ್ಸಿಗಳು ಒತ್ತಡಕ್ಕೆ ಒಳಗಾಗಿವೆ ಎಂದು ಅವರು ತಿಳಿಸಿದ್ದಾರೆ.
ಅಂತರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ದಿನದ ಆರಂಭದಲ್ಲಿ ಪ್ರತಿ ಡಾಲರ್ಗೆ 91.95 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಬಳಿಕ ಡಾಲರ್ ಎದುರು ಮೌಲ್ಯ ಕಳೆದುಕೊಂಡು ಪ್ರತಿ ಡಾಲರ್ಗೆ 92 ರೂ. ಮಟ್ಟಕ್ಕೆ ಇಳಿಯಿತು. ಮಾಸಾಂತ್ಯದಲ್ಲಿ ಹೆಚ್ಚಿರುವ ಡಾಲರ್ ಬೇಡಿಕೆಯ ನಡುವೆಯೇ, ನಿನ್ನೆಯ ವಹಿವಾಟಿನ ಅಂತ್ಯದಲ್ಲಿ 91.99 ರೂ. ಮಟ್ಟದಲ್ಲಿದ್ದ ರೂಪಾಯಿ, ಇಂದು ಆರಂಭಿಕ ವಹಿವಾಟಿನಲ್ಲಿ ಮತ್ತೊಂದು ಪೈಸೆ ನಷ್ಟ ಕಂಡಿತು.







