ಅಧಿಕಾರಿಗಳು, ಪತ್ರಕರ್ತರನ್ನು ಸಿಗ್ನಲ್, ವಾಟ್ಸ್ಯಾಪ್ ಮೂಲಕ ಗುರಿಯಾಗಿಸಿಕೊಳ್ಳುತ್ತಿರುವ ರಶ್ಯಾದ ಹ್ಯಾಕರ್ಗಳು: ಡಚ್ ಗುಪ್ತಚರ ಸಂಸ್ಥೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ (AI)
ನೆದರ್ಲ್ಯಾಂಡ್ಸ್ : ರಶ್ಯಾ ಬೆಂಬಲಿತ ಹ್ಯಾಕರ್ಗಳು ಸರಕಾರಿ ಅಧಿಕಾರಿಗಳು, ಸೈನಿಕರು ಮತ್ತು ಪತ್ರಕರ್ತರು ಸೇರಿದಂತೆ ಪ್ರಮುಖರನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ಜಾಗತಿಕ ಸೈಬರ್ ದಾಳಿ ಅಭಿಯಾನ ನಡೆಸುತ್ತಿದ್ದಾರೆ ಎಂದು ನೆದರ್ಲ್ಯಾಂಡ್ಸ್ನ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಸಿಗ್ನಲ್ ಮತ್ತು ವಾಟ್ಸ್ಯಾಪ್ ಖಾತೆಗಳ ಮೂಲಕ ರಷ್ಯಾ ಬೆಂಬಲಿತ ಹ್ಯಾಕರ್ಗಳು ಬಳಕೆದಾರರನ್ನು ಮೋಸಗೊಳಿಸಿ ಅವರ ಪಿನ್ ಕೋಡ್ಗಳನ್ನು ಬಹಿರಂಗಪಡಿಸುವಂತೆ ಮಾಡುತ್ತಾರೆ ಎಂದು ನೆದರ್ಲ್ಯಾಂಡ್ಸ್ನ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಹ್ಯಾಕರ್ಗಳು ಆರಂಭಿಸಿದ ಚಾಟ್ಗಳಲ್ಲಿ ಬಳಕೆದಾರರನ್ನು ಮೋಸಗೊಳಿಸಿ ಸೆಕ್ಯೂರಿಟಿ ವೆರಿಫೈ ಮತ್ತು ಪಿನ್ಕೋಡ್ಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಈ ಮಾಹಿತಿಯನ್ನು ಪಡೆದ ಬಳಿಕ ಅವರು ಬಳಕೆದಾರರ ವೈಯಕ್ತಿಕ ಖಾತೆಗಳು ಹಾಗೂ ಚಾಟ್ಗಳಿಗೆ ಪ್ರವೇಶ ಪಡೆಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ರಷ್ಯಾದ ಹ್ಯಾಕರ್ಗಳು ಸೂಕ್ಷ್ಮ ಮಾಹಿತಿಗೆ ಪ್ರವೇಶ ಪಡೆದಿರುವ ಸಾಧ್ಯತೆಯಿದೆ” ಎಂದು ಜನರಲ್ ಡಚ್ ಇಂಟೆಲಿಜೆನ್ಸಿ ಏಜೆನ್ಸಿ (AIVD) ಮತ್ತು ಡಚ್ ಮಿಲಿಟರಿ ಇಂಟೆಲಿಜೆನ್ಸಿ ಆಂಡ್ ಸೆಕ್ಯೂರಿಟಿ ಸರ್ವೀಸ್ (MIVD) ತಿಳಿಸಿವೆ.
ಈ ಸೈಬರ್ ದಾಳಿಗೆ ಗುರಿಯಾಗಿರುವವರಲ್ಲಿ ನೆದರ್ಲ್ಯಾಂಡ್ಸ್ ಸರಕಾರದ ಉದ್ಯೋಗಿಗಳು, ಪತ್ರಕರ್ತರು ಸೇರಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಈ ಕುರಿತು ವಾಟ್ಸ್ಯಾಪ್ ಸಂಸ್ಥೆ ರಾಯಿಟರ್ಸ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಬಳಕೆದಾರರು ತಮ್ಮ ಆರು ಅಂಕಿಯ ಪರಿಶೀಲನಾ ಕೋಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.







