ರಶ್ಯದ ತೈಲ ಖರೀದಿಸಿದರೆ ತೀವ್ರ ಆರ್ಥಿಕ ಹಿನ್ನಡೆ ಎದುರಿಸಬೇಕಾಗುತ್ತದೆ: ಭಾರತ, ಚೀನಾಕ್ಕೆ ಅಮೆರಿಕದ ಸೆನೆಟರ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಡಿಸ್ಕೌಂಟ್ ದರದಲ್ಲಿ ರಶ್ಯದ ತೈಲ ಖರೀದಿಸುವುದನ್ನು ಮುಂದುವರಿಸಿದರೆ ಭಾರತ, ಚೀನಾ ಮತ್ತು ಬ್ರೆಝಿಲ್ ಇತ್ಯಾದಿ ದೇಶಗಳು ತೀವ್ರ ಆರ್ಥಿಕ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಎಚ್ಚರಿಕೆ ನೀಡಿದ್ದಾರೆ.
ರಶ್ಯದೊಂದಿಗೆ ತೈಲ ವ್ಯಾಪಾರ ಮುಂದುವರಿಸುವ ದೇಶಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಸುಂಕ ವಿಧಿಸಲಿದ್ದಾರೆ ಎಂದ ಗ್ರಹಾಂ ʼಒಂದು ವೇಳೆ ನೀವು ರಶ್ಯದ ಕಡಿಮೆ ಬೆಲೆಯ ತೈಲ ಖರೀದಿಸಿ ಈ ಯುದ್ಧ(ಉಕ್ರೇನ್ನಲ್ಲಿನ ಯುದ್ಧ) ಮುಂದುವರಿಯಲು ಬಯಸುವಿರಾದರೆ ನಾವು ನಿಮ್ಮ ಮೇಲೆ ಅತ್ಯಂತ ಕಠಿಣ ಸುಂಕ ವಿಧಿಸುತ್ತೇವೆ. ಅಲ್ಲದೆ ನಿಮ್ಮ ಆರ್ಥಿಕತೆಯನ್ನು ಸಂಕುಚಿತಗೊಳಿಸಲಿದ್ದೇವೆ, ಯಾಕೆಂದರೆ ನೀವು ಮಾಡುತ್ತಿರುವುದು ರಕ್ತದ ಹಣವಾಗಿದೆ ಎಂದವರು ಕಿಡಿಕಾರಿದ್ದಾರೆ.
ರಶ್ಯದ ತೈಲ ಮತ್ತು ಇಂಧನ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿರುವ ದೇಶಗಳ ಮೇಲೆ 500%ದಷ್ಟು ಸುಂಕ ವಿಧಿಸುವ ಪ್ರಸ್ತಾಪದ ಮಸೂದೆಯನ್ನು ಲಿಂಡ್ಸೆ ಗ್ರಹಾಂ ಮತ್ತು ರಿಚರ್ಡ್ ಬ್ಲುಮೆಂಥಲ್ ಬೆಂಬಲಿಸಿದ್ದು ಈ ದೇಶಗಳು ಪರೋಕ್ಷವಾಗಿ ಉಕ್ರೇನ್ನಲ್ಲಿನ ಯುದ್ಧದಲ್ಲಿ ರಶ್ಯಕ್ಕೆ ಆರ್ಥಿಕ ನೆರವು ಒದಗಿಸುತ್ತಿವೆ ಎಂದು ಟೀಕಿಸಿದ್ದಾರೆ. ಉಕ್ರೇನ್ ಯುದ್ಧ ಆರಂಭವಾದಂದಿನಿಂದ ರಶ್ಯದ ತೈಲವನ್ನು ಖರೀದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಸೇರಿದೆ.
ಈ ಮಧ್ಯೆ, ಕಳೆದ ವಾರ ಶ್ವೇತಭವನದಲ್ಲಿ ನೇಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರ್ಯೂಟ್ ಜೊತೆಗೆ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಒಂದು ವೇಳೆ 50 ದಿನಗಳೊಳಗೆ ರಶ್ಯವು ಉಕ್ರೇನ್ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ರಶ್ಯದಿಂದ ತೈಲ ಖರೀದಿಸುವ ದೇಶಗಳ ವಿರುದ್ಧ 100% ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ʼರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕ್ಲಿಂಟನ್, ಬುಷ್, ಒಬಾಮಾ, ಬೈಡನ್ರನ್ನು ಮೂರ್ಖರನ್ನಾಗಿಸಿದ್ದಾರೆ. ಆದರೆ ನನ್ನನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ' ಎಂದು ಟ್ರಂಪ್ ಹೇಳಿದ್ದರು.







