ಇರಾನ್ ಯುದ್ಧನೌಕೆ ‘ಐರಿಸ್ ದೇನಾ’ ಮೇಲೆ ಅಮೆರಿಕ ದಾಳಿ; ಮೌನ ಮುರಿದ ಎಸ್. ಜೈಶಂಕರ್

Photo Credit ; X
ಹೊಸದಿಲ್ಲಿ: ಇರಾನ್ ಯುದ್ಧನೌಕೆ ‘ಐರಿಸ್ ದೇನಾ’ದ ಮುಳುಗಡೆ ಮತ್ತು ‘ಐರಿಸ್ ಲವನ್’ ತಂಗಲು ಅವಕಾಶ ನೀಡಿರುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಸಮುದ್ರ ಕಾನೂನು ಕುರಿತು ವಿಶ್ವಸಂಸ್ಥೆ ನಿರ್ಣಯ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ತಾನು ಬೆಂಬಲಿಸುವುದಾಗಿ ತಿಳಿಸಿರುವ ಅವರು, ಮಾನವೀಯತೆಯ ನೆಲೆಯಲ್ಲಿ ಐರಿಸ್ ಲವನ್ಗೆ ಕೊಚ್ಚಿಯಲ್ಲಿ ಲಂಗರು ಹಾಕಲು ಅನುಮತಿ ನೀಡಿರುವುದಾಗಿ ಹೇಳಿದ್ದಾರೆ.
ಫೆ.15ರಿಂದ ಫೆ.20ರವರೆಗೆ ವಿಶಾಖ ಪಟ್ಟಣದಲ್ಲಿ ನಡೆದ ಕಡಲ ಸಮರಾಭ್ಯಾಸ ‘ಮಿಲನ್’ನಲ್ಲಿ ಪಾಲ್ಗೊಂಡಿದ್ದ ಇರಾನ್ ನೌಕಾಪಡೆಯ ಭಾಗವಾಗಿದ್ದ ಐರಿಸ್ ಲವನ್ ಈ ಪ್ರದೇಶದಲ್ಲಿತ್ತು. ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ನಂತರ ಕೊಚ್ಚಿಗೆ ಆಗಮಿಸಿತ್ತು. ಶ್ರೀಲಂಕಾ ಸಮೀಪ ಐರಿಸ್ ದೇನಾ ಮುಳುಗಡೆ ಘಟನೆಯ ಕೆಲವು ದಿನಗಳ ಮುನ್ನ ಇರಾನ್ ಭಾರತವನ್ನು ಸಂಪರ್ಕಿಸಿತ್ತು.
ಐರಿಸ್ ಲವನ್ ಕೊಚ್ಚಿಯಲ್ಲಿ ಲಂಗರು ಹಾಕಲು ಭಾರತವು ಮಾ.1ರಂದು ಅನುಮತಿ ನೀಡಿದ್ದು,ಪ್ರಸ್ತುತ ಅದರ 183 ಸಿಬ್ಬಂದಿಗಳು ಕೊಚ್ಚಿಯ ನೌಕಾ ಸೌಲಭ್ಯಗಳಲ್ಲಿ ತಂಗಿದ್ದಾರೆ.
ರೈಸಿನಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್, ‘ನಮ್ಮ ಗಡಿಗೆ ಸಮೀಪದಲ್ಲಿದ್ದ ಹಡಗುಗಳಲ್ಲೊಂದು ನಮ್ಮ ಬಂದರನ್ನು ಪ್ರವೇಶಿಸಲು ಬಯಸಿದೆ ಎಂದು ಇರಾನ್ ನಮಗೆ ಸಂದೇಶ ರವಾನಿಸಿತ್ತು. ಹಡಗು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅವರು ನಮಗೆ ತಿಳಿಸಿದ್ದರು. ಹೀಗಾಗಿ ನಾವು ಅದಕ್ಕೆ ಅನುಮತಿಯನ್ನು ನೀಡಿದ್ದವು. ಅದು ಇಲ್ಲಿಗೆ ತಲುಪಿದಾಗ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿತ್ತು’ ಎಂದು ಹೇಳಿದರು.
‘ಸಮಸ್ಯೆಗಳಿಗೆ ಸಿಲುಕಿದ್ದ ಹಡಗು ಇಲ್ಲಿಗೆ ಬರಲು ಬಯಸಿದ್ದಾಗ ನಾವು ಮಾನವೀಯತೆಯ ನೆಲೆಯಲ್ಲಿ ಅದಕ್ಕೆ ಅನುಮತಿಯನ್ನು ನೀಡಿದ್ದೆವು. ಇರಾನಿನ ಇನ್ನೊಂದು ಹಡಗು ಸಹ ಇಂತಹುದೇ ಸಂಕಷ್ಟದಲ್ಲಿ ಸಿಲುಕಿದ್ದು,ಅದಕ್ಕೆ ಶ್ರೀಂಕಾದ ಬಂದರು ಆಶ್ರಯ ನೀಡಿದೆ. ಆದರೆ ದುರದೃಷ್ಟವಶಾತ್ ಐರಿಸ್ ದೇನಾಕ್ಕೆ ಅಂತಹ ಅವಕಾಶ ಸಿಕ್ಕಿರಲಿಲ್ಲ’ ಎಂದರು.
ಹಿಂದು ಮಹಾಸಾಗರದಲ್ಲಿಯ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್, ಪ್ರದೇಶದಲ್ಲಿಯ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ದಯವಿಟ್ಟು ಹಿಂದು ಮಹಾಸಾಗರದ ವಾಸ್ತವವನ್ನು ಅರ್ಥ ಮಾಡಿಕೊಳ್ಳಿ. ಡಿಯಾಗೋ ಗಾರ್ಸಿಯಾ ದ್ವೀಪದಲ್ಲಿ ಐದು ದಶಕಗಳಿಂದಲೂ ಅಮೆರಿಕದ ಬೃಹತ್ ಸೇನಾ ನೆಲೆ ಅಸ್ತಿತ್ವದಲ್ಲಿದೆ. ಈ ಶತಮಾನದ ಮೊದಲ ದಶಕದಿಂದಲೇ ಜಿಬೂಟಿಯಲ್ಲಿ ವಿದೇಶಿ ಪಡೆಗಳು ನೆಲೆಗೊಂಡಿವೆ. ಇದೇ ಅವಧಿಯಲ್ಲಿ ಹಂಬನತೋಟ ಬಂದರು ಕೂಡ ಚೀನಾದ ನಿಯಂತ್ರಣಕ್ಕೆ ಸೇರಿದೆ ಎಂದರು.
ಸಂಘರ್ಷದಿಂದ ಪ್ರಭಾವಿತ ಜಲಪ್ರದೇಶದಲ್ಲಿ ವಾಣಿಜ್ಯ ನೌಕೆಗಳ ಸುರಕ್ಷತೆಗೂ ಕರೆ ನೀಡಿದ ಅವರು,‘ವಾಣಿಜ್ಯ ನೌಕೆಗಳ ಹೆಚ್ಚಿನ ಸಿಬ್ಬಂದಿಗಳು ಭಾರತೀಯರಾಗಿದ್ದಾರೆ. ಪ್ರತಿ ಸಲವೂ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದಾಗ ಅದರ ಒಂದು ಭಾಗವು ಭಾರತೀಯರಿಂದ ನಿರ್ವಹಿಸಲ್ಪಡುತ್ತಿರುವ ಹೆಚ್ಚಿನ ಸಾಧ್ಯತೆಯಿದೆ. ಕಳೆದ ಕೆಲವು ದಿನಗಳಲ್ಲಿ ವಿದೇಶಿ ನೌಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಭಾರತೀಯರು ಮೃತಪಟ್ಟಿದ್ದಾರೆ,ಹೀಗಾಗಿ ನಾವು ಈ ವಿಷಯಕ್ಕೆ ಪ್ರಾಮುಖ್ಯವನ್ನು ನೀಡಬೇಕಾಗುತ್ತದೆ ’ಎಂದರು.
‘ಕೊಲ್ಲಿಯಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸವಾಗಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ಈ ಬಿಕ್ಕಟ್ಟಿನ ಕುರಿತು ನಮ್ಮ ನಿಲುವನ್ನು ಹೊಂದಿದ್ದೇವೆ. ದೇಶಗಳು ತಮ್ಮದೇ ಸ್ವಂತ ಹಿತಾಸಕ್ತಿಗಳು,ತಮ್ಮ ಆರ್ಥಿಕ ಅಥವಾ ಇಂಧನ ಕಾಳಜಿಗಳನ್ನು ಹೊಂದಿರುತ್ತವೆ ಮತ್ತು ಸಹಜವಾಗಿಯೇ ನಮ್ಮ ನೀತಿಗಳು ಅವೆಲ್ಲವನ್ನು ಗಣನೆಗೆ ತೆಗೆದುಕೊಳ್ಳುತ್ತವೆ’ ಎಂದು ಜೈಶಂಕರ್ ಹೇಳಿದರು.







