ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಬಂದ ಬಳಿಕ ಕೂಲಿ ಕಾರ್ಮಿಕರು ವಲಸೆಗೆ ತಯಾರಿಲ್ಲ: ಮತ್ತೊಂದು ವಿವಾದ ಕಿಡಿ ಹೊತ್ತಿಸಿದ ಎಲ್ ಆ್ಯಂಡ್ ಟಿ ಮುಖ್ಯಸ್ಥ ಸುಬ್ರಹ್ಮಣ್ಯನ್

ಎಸ್.ಎನ್.ಸುಬ್ರಹ್ಮಣ್ಯನ್ | Credit: L&T website
ಚೆನ್ನೈ: ಇತ್ತೀಚೆಗಷ್ಟೆ ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ದುಡಿಯಬೇಕು ಎಂಬ ಹೇಳಿಕೆ ನೀಡುವ ಮೂಲಕ ಸಹ ಉದ್ಯಮಿಗಳು ಹಾಗೂ ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಗಿದ್ದ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್, ಇದೀಗ ಕಲ್ಯಾಣ ಕಾರ್ಯಕ್ರಮಗಳ ಆರಾಮದಾಯಕತೆಯನ್ನು ಪರಿಗಣಿಸುತ್ತಿರುವ ಕೂಲಿ ಕಾರ್ಮಿಕರು ವಲಸೆ ಹೋಗಲು ಬಯಸುತ್ತಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಮತ್ತೊಂದು ಸುತ್ತಿನ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಇಲ್ಲಿ ನಡೆದ ಸಿಐಐ ದಕ್ಷಿಣ ಜಾಗತಿಕ ಸಂಪರ್ಕಗಳ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಸುಬ್ರಹ್ಮಣ್ಯನ್, “ಕೂಲಿ ಕಾರ್ಮಿಕರು ತಮ್ಮ ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ಆರಾಮದಾಯಕತೆ ಒದಗಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ ವಲಸೆ ಹೋಗಲು ಬಯಸದೆ ಇರುವುದರಿಂದ, ನಮ್ಮ ಸಂಸ್ಥೆಯು ನಿರ್ಮಾಣ ಕೆಲಸಗಳಿಗೆ ಕೂಲಿ ಕಾರ್ಮಿಕರನ್ನು ಹೊಂದಿಸಲು ಹೋರಾಡುತ್ತಿದೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಸರಕಾರಗಳ ಕಲ್ಯಾಣ ಕಾರ್ಯಕ್ರಮಗಳನ್ನು ಟೀಕಿಸಿದರು.
‘ಕೂಲಿ ಕಾರ್ಮಿಕರು ವಲಸೆಗೆ ಬಯಸದಿರುವ ಸಮಸ್ಯೆಯು ಭಾರತದ ಮಟ್ಟಿಗೆ ವಿಚಿತ್ರವಾಗಿದ್ದು, ಜಗತ್ತಿನ ಉಳಿದ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ವಲಸೆ ಹೋಗುತ್ತಾರೆ” ಎಂದು ಅವರು ಹೇಳಿದರು.
ನಮ್ಮ ಸಂಸ್ಥೆಯ ನಿರ್ಮಾಣ ಯೋಜನೆಗಳಿಗೆ ವರ್ಷಕ್ಕೆ 4 ಲಕ್ಷ ಕೂಲಿ ಕಾರ್ಮಿಕರ ಅಗತ್ಯವಿದ್ದರೂ, ಈ ವಲಯದಲ್ಲಿನ ಭಾರಿ ಪ್ರಮಾಣದ ಸವಕಳಿ ದರದ ಕಾರಣಕ್ಕೆ ನಾವು ಸುಮಾರು 16 ಲಕ್ಷ ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಕೂಲಿ ಕಾರ್ಮಿಕರಲ್ಲಿನ ಸವಕಳಿ ದರಕ್ಕೆ ಹಲವಾರು ಕಾರಣಗಳಿದ್ದು, ಇವಕ್ಕೆ ಜನ್ ಧನ್ ಬ್ಯಾಂಕ್ ಖಾತೆ, ವಿವಿಧ ನೇರ ನಗದು ವರ್ಗಾವಣೆ ಯೋಜನೆಗಳು, ಗರೀಬ್ ಕಲ್ಯಾಣ್ ಯೋಜನೆ ಹಾಗೂ ನರೇಗಾದಂಥ ಯೋಜನೆಗಳು ಉದಾಹರಣೆಗಳು ಎಂದು ಅವರು ಉಲ್ಲೇಖಿಸಿದರು. “ಆರಾಮದಾಯಕವಾಗಿರುವುದನ್ನು ಪರಿಗಣಿಸುವ ಕೂಲಿ ಕಾರ್ಮಿಕರು ಗ್ರಾಮೀಣ ಸ್ಥಳಗಳನ್ನು ತೊರೆಯಲು ಬಯಸುತ್ತಿಲ್ಲ” ಎಂದೂ ಸುಬ್ರಹ್ಮಣ್ಯನ್ ಅಭಿಪ್ರಾಯಪಟ್ಟರು.
ದೇಶಾದ್ಯಂತ ಇರುವ ನಿರ್ಮಾಣ ಸಂಸ್ಥೆಗಳು ಕೂಲಿ ಕಾರ್ಮಿಕರು ಹಾಗೂ ಬಡಗಿಗಳನ್ನು ಹೊಂದಿಸಿಕೊಳ್ಳಲು ಹೋರಾಡುತ್ತಿದ್ದು, ಎಲ್ ಆ್ಯಂಡ್ ಟಿ ಸಂಸ್ಥೆಯು ಕೂಲಿ ಕಾರ್ಮಿಕರನ್ನು ನಿರ್ವಹಿಸಲು ಹೊಸ ವಿಭಾಗವನ್ನೇ ರಚಿಸಿದೆ ಎಂದು ಅವರು ಹೇಳಿದರು.
ನಿರ್ಮಾಣ ವಲಯ ಮಾತ್ರವಲ್ಲದೆ, ವೃತ್ತಿಪರರು ಸ್ಥಳಾಂತರಗೊಳ್ಳೂಲು ಬಯಸದೆ ಇರುವುದರಿಂದ ಇಂಜಿನಿಯರಿಂಗ್ ವಿಭಾಗದ ಹಲವಾರು ವಲಯಗಳೂ ಕೂಡಾ ಈ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಹೇಳಿದ ಅವರು, ನಾನು 1983ರಲ್ಲಿ ಸಂಸ್ಥೆಗೆ ಸೇರ್ಪಡೆಯಾದಾಗ, ನನಗೆ ನನ್ನ ಮೇಲಧಿಕಾರಿಯು ಚೆನ್ನೈನಿಂದ ದಿಲ್ಲಿಗೆ ಸ್ಥಳ ಬದಲಾಯಿಸುವಂತೆ ಸೂಚಿಸಿದ್ದರು ಎಂದು ಸ್ಮರಿಸಿದರು.
“ಆದರೆ, ಇಂದು ನಾನು ಚೆನ್ನೈನಲ್ಲಿ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿಕೊಂಡು, ದಿಲ್ಲಿಯಲ್ಲಿ ಕೆಲಸ ಮಾಡುವಂತೆ ಆತನಿಗೆ ಸೂಚಿಸಿದರೆ, ಆತ ಉದ್ಯೋಗಕ್ಕೆ ವಿದಾಯ ಹೇಳುತ್ತಾನೆ. ಇಂತಹ ಪ್ರವೃತ್ತಿಯು ಐಟಿ ವಲಯದಲ್ಲಿ ಹೆಚ್ಚು ಕಂಡು ಬರುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಭಾರತದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡಬೇಕಾದ ಅಗತ್ಯದ ಕುರಿತು ಒತ್ತಿ ಹೇಳಿದ ಅವರು, ಆದರೆ, ಅಗತ್ಯಕ್ಕೆ ತಕ್ಕಷ್ಟು ಉದ್ಯೋಗಿಗಳನ್ನು ಪೂರೈಸಲಾಗುತ್ತಿಲ್ಲ ಎಂದು ವಿಷಾದಿಸಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರತೀಯ ಸಂಸ್ಥೆಗಳಿಗೆ ಹೆಚ್ಚುತ್ತಿರುವ ಅವಕಾಶಗಳ ಕುರಿತು ಮಾತನಾಡಿದ ಸುಬ್ರಹ್ಮಣ್ಯನ್, ಭಾರತಕ್ಕಿಂತ ಹೆಚ್ಚು ವೇತನವಿರುವುದರಿಂದ, ಕೆಲಸಗಾರರು ಸೌದಿ ಅರೇಬಿಯಾ, ಒಮನ್ ಹಾಗೂ ಖತರ್ ನಲ್ಲಿನ ಉದ್ಯೋಗಗಳನ್ನು ಹೆಚ್ಚು ಪರಿಗಣಿಸುತ್ತಾರೆ ಎಂದು ತಿಳಿಸಿದರು.







