ಶಬರಿಮಲೆ: ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದ ಮಹಿಳೆ ಕುಸಿದು ಬಿದ್ದು ಮೃತ್ಯು

Photo - ANI
ಪಟ್ಟಣಂತಿಟ್ಟ (ಕೇರಳ),ನ.19: ಮಂಗಳವಾರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದ 58ರ ಹರೆಯದ ಮಹಿಳೆಯೋರ್ವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ.ಜಯಕುಮಾರ ಅವರು, ಮಹಿಳೆಯ ಮೃತದೇಹವನ್ನು ಟಿಡಿಪಿ ವೆಚ್ಚದಲ್ಲಿ ಆ್ಯಂಬುಲೆನ್ಸ್ ಮೂಲಕ ಅವರ ಊರಿಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಮೃತ ಮಹಿಳೆ ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ನಿವಾಸಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದರು.
ಈ ನಡುವೆ, ಕರ್ನಾಟಕದಿಂದ ಮಕ್ಕಳು ಸೇರಿದಂತೆ 33 ಯಾತ್ರಿಗಳೊಂದಿಗೆ ಶಬರಿಮಲೆಗೆ ಬರುತ್ತಿದ್ದ ಬಸ್ಸೊಂದು ಕೊಟ್ಟಾಯಂ ಜಿಲ್ಲೆಯ ಎರುಮೇಲಿ ಬಳಿ ಪಲ್ಟಿಯಾಗಿದೆ. ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದರು.
ಬಸ್ಸಿನ ಚಾಲಕ ಇಳಿಜಾರಿನಲ್ಲಿ ಇನ್ನೊಂದು ವಾಹನವನ್ನು ಹಿಂದಿಕ್ಕುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೋಲಿಸರು ತಿಳಿಸಿದರು.





