ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣ |ಮುಖ್ಯ ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದ ವಿಶೇಷ ತನಿಖಾ ತಂಡ

Credit: PTI Photo
ಪತ್ತನಂತಿಟ್ಟ (ಕೇರಳ), ಅ. 24: ಶಬರಿಮಲೆ ದೇವಾಲಯದಿಂದ ಚಿನ್ನ ಕಳವು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಾಕ್ಷ್ಯ ಸಂಗ್ರಹ ಪ್ರಕ್ರಿಯೆಯ ಭಾಗವಾಗಿ ಪ್ರಧಾನ ಆರೋಪಿ ಉಣ್ಣಿ ಕೃಷ್ಣನ್ ಪೊಟ್ಟಿಯನ್ನು ಶುಕ್ರವಾರ ಬೆಂಗಳೂರಿಗೆ ಕರೆದುಕೊಂಡು ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಐಟಿ ತಂಡ ಪೊಟ್ಟಿಯೊಂದಿಗೆ ತಿರುವನಂತಪುರದಲ್ಲಿರುವ ಕ್ರೈಮ್ ಬ್ರಾಂಚ್ನ ಕಚೇರಿಯಿಂದ ಶುಕ್ರವಾರ ಮುಂಜಾನೆ ಬೆಂಗಳೂರಿಗೆ ತೆರಳಿದೆ.
ತನಿಖಾ ತಂಡ ಖಚಿತವಾಗಿ ಯಾವ ಸಾರಿಗೆಯನ್ನು ಬಳಸಿದೆ ಎಂದು ಇದುವರೆಗೆ ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯ ಸಂಗ್ರಹದ ಭಾಗವಾಗಿ ಪೊಟ್ಟಿಯನ್ನು ಚೆನ್ನೈ ಹಾಗೂ ಹೈದರಾಬಾದ್ಗೆ ಕೂಡ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ರನ್ನಿಯ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪೊಟ್ಟಿಯನ್ನು ಅಕ್ಟೋಬರ್ 30ರವರೆಗೆ ಎಸ್ಐಟಿಯ ಕಸ್ಟಡಿಗೆ ನೀಡಿದೆ. ಈ ಕಸ್ಟಡಿ ಅವಧಿ ಮುಗಿಯುವ ಮುನ್ನ ಸಾಕ್ಷ್ಯ ಸಂಗ್ರಹವನ್ನು ಪೂರ್ಣಗೊಳಿಸುವ ಗುರಿಯನ್ನು ತಂಡ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಪ್ರಕಾರ, ದ್ವಾರಪಾಲಕ ವಿಗ್ರಹಕ್ಕೆ ಇಲೆಕ್ಟೋಪ್ಲೇಟಿಂಗ್ ಮಾಡಲು ಪೊಟ್ಟಿ ತಿರುವಾಂಕೂರು ದೇವಸ್ವ ಮಂಡಳಿಯಿಂದ ಚಿನ್ನ ಲೇಪಿತ ತಾಮ್ರದ ಹೊದಿಕೆಯನ್ನು ಪಡೆದುಕೊಂಡಿದ್ದ.
ಅನಂತರ ಪೊಟ್ಟಿ ಇದನ್ನು ಅನುಮತಿ ಇಲ್ಲದೆ ದಕ್ಷಿಣ ಭಾರತದ ರಾಜ್ಯಗಳ ಹಲವು ದೇವಾಲಯಗಳು ಹಾಗೂ ಮನೆಗಳಿಗೆ ಸಾಗಿಸಿದ್ದ ಎಂದು ಹೇಳಲಾಗಿದೆ.







