ಶಬರಿಮಲೆ ಚಿನ್ನ ನಾಪತ್ತೆ: 9 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿರುವ ಟಿಡಿಬಿ

ಶಬರಿಮಲೆ ದೇವಾಲಯ | PC : PTI
ಪತ್ತನಂತಿಟ್ಟ (ಕೇರಳ),ಅ.11: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಯ(ಟಿಡಿಬಿ) ಜಾಗ್ರತ ವಿಭಾಗವು ಒಂಭತ್ತು ಅಧಿಕಾರಿಗಳ ಲೋಪಗಳನ್ನು ಎತ್ತಿ ತೋರಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್.ಪ್ರಶಾಂತ ಅವರು ಶನಿವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪ ದೇವಸ್ವಂ ಆಯುಕ್ತ(ಹರಿಪಾದ) ಬಿ.ಮುರಾರಿ ಬಾಬು ವಿರುದ್ಧ ಈಗಾಗಲೇ ಕ್ರಮವನ್ನು ಆರಂಭಿಸಲಾಗಿದೆ. ಅ.14ರಂದು ನಡೆಯಲಿರುವ ಮಂಡಳಿಯ ಸಭೆಯಲ್ಲಿ ಉಳಿದ ಅಧಿಕಾರಿಗಳ ವಿರುದ್ಧ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು. ಬಾಬು ಹಿಂದೆ ಶಬರಿಮಲೆಯಲ್ಲಿ ಟಿಡಿಬಿ ಆಡಳಿತಾತ್ಮಕ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಟಿಡಿಬಿ ಕಾರ್ಯದರ್ಶಿ ಜಯಶ್ರೀ,ಕಾರ್ಯ ನಿರ್ವಾಹಕ ಅಧಿಕಾರಿ ಸುಧೀಶ,ಆಡಳಿತಾಧಿಕಾರಿ ಶ್ರೀಕುಮಾರ ಮತ್ತು ಮಾಜಿ ತಿರುವಾಭರಣಂ ಆಯುಕ್ತ ಕೆ.ಎಸ್.ಬೈಜು ಅವರು ಕ್ರಮ ಎದುರಿಸುವ ಸಾಧ್ಯತೆಯಿರುವ ಅಧಿಕಾರಿಗಳಲ್ಲಿ ಸೇರಿದ್ದಾರೆ ಎಂದು ಹೇಳಿದ ಪ್ರಶಾಂತ್, ಬೈಜು ನಂತರ ಬಂದಿದ್ದ ಅಧಿಕಾರಿಗೆ ಚಿನ್ನದ ತೂಕ ಕಡಿಮೆಯಾಗಿದ್ದು ತಿಳಿದಿತ್ತು,ಆದರೆ ಅದನ್ನು ವರದಿ ಮಾಡಲು ಅವರು ವಿಫಲಗೊಂಡಿದ್ದರು ಎಂದರು.
ಪ್ರಶಾಂತ ಪ್ರಕಾರ ಶಬರಿಮಲೆ ದೇವಸ್ಥಾನದಲ್ಲಿಯ ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನಗಳ ಹೊದಿಕೆಗಳನ್ನು ದುರಸ್ತಿ ಮಾಡಲು ಸಂಬಂಧಿಸಿದ ಸಂಸ್ಥೆಗೆ ತಿರುವಾಭರಣಂ ಆಯುಕ್ತರ ಮೇಲ್ವಿಚಾರಣೆಯಲ್ಲಿ ಹಸ್ತಾಂತರಿಸುವಂತೆ 2019ರ ಟಿಡಿಬಿ ಆದೇಶದಲ್ಲಿ ತಿಳಿಸಲಾಗಿತ್ತು ಹಾಗೂ ಅವುಗಳ ಜವಾಬ್ದಾರಿ ಮತ್ತು ಪ್ರಾಯೋಜಕತ್ವವನ್ನು ಉನ್ನಿಕೃಷ್ಣನ್ ಪೊಟ್ಟಿಗೆ ವಹಿಸಲಾಗಿತ್ತು.
ಆದರೆ ಟಿಡಿಬಿ ಜಯಶ್ರೀ ಪೊಟ್ಟಿಗೆ ಚಿನ್ನದ ಹೊದಿಕೆಗಳನ್ನು ಹಸ್ತಾಂತರಿಸಬಹುದು ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ತಿರುವಾಭರಣಂ ಆಯುಕ್ತರಿಗೆ ತಿಳಿಸಿದ್ದರು. ಇಂತಹ ಕಾರ್ಯವಿಧಾನ ಲೋಪಗಳು ಸಂಭವಿಸಿವೆ ಎಂದು ಪ್ರಶಾಂತ ಹೇಳಿದರು.
ರಾಜಕೀಯ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರಶಾಂತ,ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ವಿ.ಡಿ.ಸತೀಶನ್ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು,ಈ ವಿಷಯಕ್ಕೂ ಹಾಲಿ ಮಂಡಳಿಗೂ ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ನಮ್ಮ ಮೇಲೆ ಆರೋಪಗಳನ್ನೇಕೆ ಹೊರಿಸಲಾಗುತ್ತಿದೆೆ ಎಂದು ಪ್ರಶ್ನಿಸಿದರು.







