ಸಚಿನ್ಗೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ನಿಂದ ಗೌರವ ಕ್ರಿಕೆಟ್ ಸದಸ್ಯತ್ವ

ಸಚಿನ್ ತೆಂಡುಲ್ಕರ್ | PTI
ಮೆಲ್ಬರ್ನ್ : ಕ್ರಿಕೆಟ್ಗೆ ನೀಡಿರುವ ಕೊಡುಗೆಗಾಗಿ ಶುಕ್ರವಾರ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ರಿಗೆ ಗೌರವ ಕ್ರಿಕೆಟ್ ಸದಸ್ಯತ್ವ ನೀಡುವ ಮೂಲಕ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ (ಎಮ್ಸಿಸಿ) ಗೌರವಿಸಿದೆ.
‘‘ಕ್ರಿಕೆಟ್ನ ಮೇರು ವ್ಯಕ್ತಿಯೊಬ್ಬರನ್ನು ಗೌರವಿಸಲಾಗಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಗೌರವ ಕ್ರಿಕೆಟ್ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ ಎಂದು ಘೋಷಿಸಲು ಎಮ್ಸಿಸಿಗೆ ಸಂತೋಷವಾಗುತ್ತದೆ. ಕ್ರಿಕೆಟ್ಗೆ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಸದಸ್ಯತ್ವವನ್ನು ನೀಡಲಾಗಿದೆ’’ ಎಂದು ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದೆ.
ಮೆಲ್ಬರ್ನ್ ಕ್ರಿಕೆಟ್ ಕ್ಲಬ್ಅನ್ನು 1983 ನವೆಂಬರ್ 15ರಂದು ಫ್ರೆಡರಿಕ್ ಪವ್ಲೆಟ್, ರಾಬರ್ಟ್ ರಸೆಲ್, ಜಾರ್ಜ್ ಬಿ. ಸ್ಮಿತ್ ಹಾಗೂ ಸಹೋದರರಾದ ಆಲ್ಫ್ರೆಡ್ ಮತ್ತು ಚಾರ್ಲ್ಸ್ ಮಂಡಿ ಸ್ಥಾಪಿಸಿದ್ದಾರೆ ಎಂದು ಎಮ್ಸಿಸಿ ವೆಬ್ಸೈಟ್ ಹೇಳುತ್ತದೆ.
ಸಚಿನ್ ತೆಂಡುಲ್ಕರ್ ತನ್ನ ಅಪ್ರತಿಮ ಕ್ರಿಕೆಟ್ ಕೌಶಲ ಮತ್ತು ಪರಿಣತಿ ಮೂಲಕ 1989ರಿಂದ 2013ರವರೆಗೆ ಜಗತ್ತಿನಾದ್ಯಂತದ ಅಭಿಮಾನಿಗಳನ್ನು ರಂಜಿಸಿದ್ದಾರೆ ಎಂದು ಎಮ್ಸಿಸಿ ಹೇಳಿದೆ. ಮುಂಬೈ ಸಂಜಾತ ಸಚಿನ್ 1989 ನವೆಂಬರ್ 15ರಂದು 16ರ ಹರಯದಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವಾಡಿದರು. ಅದೇ ವರ್ಷದ ಡಿಸೆಂಬರ್ 18ರಂದು ಅವರು ತನ್ನ ಮೊದಲ ಏಕದಿನ ಪಂದ್ಯವಾಡಿದರು.
ಅವರು 664 ಅಂತರ್ರಾಷ್ಟ್ರೀಯ ಪಂದ್ಯಗಳಿಂದ 48.52ರ ಸರಾಸರಿಯಲ್ಲಿ ಒಟ್ಟು 34,357 ರನ್ಗಳನ್ನು ಕಲೆಹಾಕಿದ್ದಾರೆ. ಅವರು ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ. ಅವರು 100 ಶತಕ, 164 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆಗಳನ್ನು ಈವರೆಗೆ ಯಾರೂ ಮುರಿದಿಲ್ಲ. ಅವರು ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗನಾಗಿದ್ದಾರೆ. ಅವರು ದಾಖಲೆಯ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.







