7 ನಗರಗಳಿಗೆ ವಿಮಾನ ಸಂಚಾರ ರದ್ದುಪಡಿಸಿದ ಏರ್ಇಂಡಿಯಾ, ಇಂಡಿಗೊ ಕಂಪನಿ

PC | X
ಹೊಸದಿಲ್ಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದರೂ, ಗಡಿಭಾಗದ ಹಲವು ನಗರಗಳಿಗೆ ವಿಮಾನ ಸಂಚಾರವನ್ನು ಪ್ರಮುಖ ವಿಮಾನಯಾನ ಕಂಪನಿಗಳಾದ ಇಂಡಿಗೊ ಮತ್ತು ಏರ್ಇಂಡಿಯಾ ರದ್ದುಗೊಳಿಸಿವೆ. ಶ್ರೀನಗರ, ಜಮ್ಮು, ಅಮೃತಸರ, ಚಂಡೀಗಢ ಮತ್ತು ಇತರ ಮೂರು ಗಡಿಪ್ರದೇಶಗಳಿಗೆ ಹಾರಾಟ ರದ್ದುಪಡಿಸಲಾಗಿದೆ.
ಜಮ್ಮು, ಲೆಹ್, ಜೋಧಪುರ, ಅಮೃತಸರ, ಭುಜ್, ಜಾಮನಗರ, ಚಂಡೀಗಢ ಮತ್ತು ರಾಜ್ಕೋಟ್ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಜಮ್ಮು, ಅಮೃತಸರ, ಚಂಡೀಗಢ, ಲೆಹ್ ಮತ್ತು ರಾಜ್ಕೋಟ್ ವಿಮಾನಗಳ ಸಂಚಾರವನ್ನು ಇಂಡಿಗೊ ರದ್ದುಪಡಿಸಿದೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತು ನಿಮ್ಮ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಮಂಗಳವಾರ ಅಂದರೆ ಮೇ 13ರಂದು ಈ ನಗರಗಳಿಗೆ ವಿಮಾನ ಸಂಚಾರ ರದ್ದುಪಡಿಸಲಾಗುತ್ತಿದೆ. ನಾವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದು, ಮುಂದಿನ ಮಾಹಿತಿ ನೀಡಲಾಗುತ್ತಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಏರ್ ಇಂಡಿಯಾ ವಿವರಿಸಿದೆ.
ಇದು ನಿಮ್ಮ ಪ್ರವಾಸದ ಯೋಜನೆಯನ್ನು ವ್ಯತ್ಯಯಗೊಳಿಸಬಹುದು. ಅನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇವೆ. ನಮ್ಮ ತಂಡ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದ್ದು, ಮುಂದಿನ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದೆ.







