ಮಧ್ಯಪ್ರದೇಶ: ರಾಮ ಮಂದಿರ ಉದ್ಘಾಟನೆಗೆ ಮುನ್ನ ಚರ್ಚ್ ಮೇಲೆ ಭಗವಾ ಧ್ವಜ ಆರೋಹಣ ಮಾಡಿದ ದುಷ್ಕರ್ಮಿಗಳು
Photo credit: thequint.com
ಜಾಬುವಾ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಮುನ್ನಾ ದಿನ ಮಧ್ಯಪ್ರದೇಶದ ಜಾಬುವಾ ಜಿಲ್ಲೆಯ ರಾಣಾಪುರದ ದಬ್ತಲೈ ಗ್ರಾಮದ ಚರ್ಚ್ನ ಮೇಲೆ ಗುಂಪೊಂದು ‘ಜೈ ಶ್ರೀರಾಮ’ ಘೋಷಣೆಗಳ ನಡುವೆ ಭಗವಾ ಧ್ವಜವನ್ನು ಹಾರಿಸಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಕೆಲವರು ಚರ್ಚ್ ಕಟ್ಟಡವನ್ನು ಹತ್ತಿ ಅಲ್ಲಿದ್ದ ಶಿಲುಬೆಗೆ ಭಗವಾ ಧ್ವಜವನ್ನು ಕಟ್ಟುತ್ತಿರುವ ದೃಶ್ಯಗಳಿವೆ. ಭಗವಾ ಧ್ವಜದ ಮೇಲೆ ಅಯೋಧ್ಯೆಯ ರಾಮ ಮಂದಿರದ ಚಿತ್ರವಿದ್ದು, ‘ಜೈ ಶ್ರೀರಾಮ’ ಎಂದು ಬರೆಯಲಾಗಿತ್ತು ಎಂದು thequint.com ವರದಿ ಮಾಡಿದೆ.
"ರವಿವಾರ ಅಪರಾಹ್ನ ಮೂರು ಗಂಟೆಯ ಸುಮಾರಿಗೆ ನಾವು ಪ್ರಾರ್ಥನೆಯನ್ನು ಮುಗಿಸಿದ ಬೆನ್ನಿಗೇ ಗುಂಪೊಂದು ಎಲ್ಲಿಂದಲೋ ಪ್ರತ್ಯಕ್ಷವಾಗಿತ್ತು. ಗುಂಪಿನಲ್ಲಿ ಕನಿಷ್ಠ 25 ಜನರಿದ್ದು, ‘ಜೈ ಶ್ರೀರಾಮ’ ಘೋಷಣೆಗಳನ್ನು ಕೂಗುತ್ತಿದ್ದರು. ಅವರಲ್ಲಿ ಕೆಲವರು ಚರ್ಚ್ನ ಮೇಲೆ ಹತ್ತಿ ಭಗವಾ ಧ್ವಜವನ್ನು ಹಾರಿಸಿದ್ದರು" ಎಂದು ಪ್ಯಾಸ್ಟರ್ ನರ್ಬು ಅಮಲಿಯಾರ್ ಸುದ್ದಿಸಂಸ್ಥೆಗೆ ತಿಳಿಸಿದರು.
‘ಗುಂಪಿನಲ್ಲಿಯ ಕೆಲವರನ್ನು ನಾನು ಗುರುತಿಸಿದ್ದು, ಅವರು ನೆರೆಯ ಗ್ರಾಮದವರಾಗಿದ್ದರು. ಅವರಲ್ಲಿ ಕೆಲವರ ಹೆಸರುಗಳೂ ನನಗೆ ಗೊತ್ತು. ಇದು ಸರಿಯಲ್ಲ ಎಂದು ಅವರಿಗೆ ತಿಳಿಹೇಳಲು ನಾನು ಪ್ರಯತ್ನಿಸಿದ್ದೆ. ನಾವು ಇಲ್ಲಿ ಕೇವಲ ದೇವರ ಆರಾಧಕರು ಮತ್ತು ಅವರು ನಮಗೆ ತೊಂದರೆ ನೀಡಬಾರದು ಎಂದು ನಾನು ಕೇಳಿಕೊಂಡಿದ್ದೆ, ಆದರೆ ಅವರು ಕೇಳಲಿಲ್ಲ’ ಎಂದ ಅಮಲಿಯಾರ್,‘ಅಲ್ಲೇನು ನಡೆಯುತ್ತಿದೆ ಎನ್ನುವುದು ನನಗೆ ಅರ್ಥವಾಗಿರಲಿಲ್ಲ,ಹೀಗೆ ಹಿಂದೆಂದೂ ಸಂಭವಿಸಿರಲಿಲ್ಲ’ ಎಂದು ತಿಳಿಸಿದರು.
ಈ ನಡುವೆ ಜಾಬುವಾ ಎಸ್ಪಿ ಆಗಮ್ ಜೈನ್ ಅವರು,‘ಘಟನೆಯ ಕುರಿತು ಯಾವುದೇ ಎಫ್ಐಆರ್ ಈವರೆಗೆ ದಾಖಲಾಗಿಲ್ಲ. ನಮ್ಮ ತಂಡವು ರವಿವಾರ ಸಂಜೆ ಅಲ್ಲಿಗೆ ಭೇಟಿ ನೀಡಿತ್ತು. ಅದು ವ್ಯಕ್ತಿಯೋರ್ವರ ನಿವಾಸವಾಗಿದ್ದು,ಅದನ್ನು ಅವರು ಪ್ರಾರ್ಥನೆಗಾಗಿ ಬಳಸುತ್ತಿದ್ದಾರೆ. ಅದು ಚರ್ಚ್ ಆಗಿರಲಿಲ್ಲ. ಹೀಗಾಗಿ ನಾವು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಳ್ಳಲಿಲ್ಲ. ವ್ಯಕ್ತಿ ದೂರು ಸಲ್ಲಿಸಲು ಬಯಸಲಿಲ್ಲ,ಹೀಗಾಗಿ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ’ ಎಂದು ತಿಳಿಸಿದರು.
ಆದರೆ ಅದು ತನ್ನ ಮನೆ ಎನ್ನುವುದನ್ನು ನಿರಾಕರಿಸಿದ ಅಮಲಿಯಾರ್, ‘ಅದು ನಾನು 2016ರಲ್ಲಿ ಆರಂಭಿಸಿದ್ದ ಚರ್ಚ್ ಆಗಿದೆ. ಪ್ರತಿ ರವಿವಾರ 30-40 ಜನರು ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ. ಅದು ಆರಾಧನಾ ಸ್ಥಳವಾಗಿದೆ. ನನ್ನ ಮನೆ ಪ್ರತ್ಯೇಕವಾಗಿದೆ ’ಎಂದರು. ತಾನು ಇನ್ನೂ ದೂರು ಸಲ್ಲಿಸಿಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡರು.
‘ಗುಂಪಿನಲ್ಲಿದ್ದವರು ಬಳಿಕ ನನ್ನನ್ನು ಕರೆದು ಕ್ಷಮೆ ಯಾಚಿಸಿದ್ದರು. ಹೀಗಾಗಿ ದೂರು ಸಲ್ಲಿಸಬೇಕೇ ಎನ್ನುವುದು ನನಗೆ ಖಚಿತವಿಲ್ಲ, ನಾನು ಗ್ರಾಮದ ಸರಪಂಚರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ ’ಎಂದರು.